ಬೆಳ್ತಂಗಡಿ: ಮುಂಡಾಜೆ ಗ್ರಾಮದ ಸೀಟ್‌ಕಾಡ್ ಬಳಿ ಚಾರ್ಮಾಡಿ–ಉಜಿರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಜುಲೈ 9ರ ಗುರುವಾರ ಬೆಳಿಗ್ಗೆ ಎರಡು ಕಾರುಗಳ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಆರು ಮಂದಿ ಗಾಯಗೊಂಡಿದ್ದು, ಅಪಘಾತದ ತೀವ್ರತೆಗೆ ಎರಡೂ ಕಾರುಗಳು ನುಜ್ಜುಗುಜ್ಜಾಗಿವೆ.

ಗಾಯಗೊಂಡವರನ್ನು ಮಂಗಳೂರು ಕಾವೂರು ಮೂಲದ ವಿನಿತಾ (22), ಗೌರಮ್ಮ (49), ಕೊಟ್ರೆಗೌಡ (55) ಹಾಗೂ ಯಾದಗಿರಿ ಜಿಲ್ಲೆಯ ಸುರಪುರ ಮೂಲದ ಭೀಮಣ್ಣ (65), ಶ್ರೀನಿವಾಸ (32) ಮತ್ತು ಶಶಿಧರ (33) ಎಂದು ಗುರುತಿಸಲಾಗಿದೆ.

ಅಪಘಾತದ ಬಳಿಕ ಸ್ಥಳೀಯರು ತಕ್ಷಣ ರಕ್ಷಣಾ ಕಾರ್ಯ ನಡೆಸಿ ಗಾಯಾಳುಗಳನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಗಾಯಾಳುಗಳಿಗೆ ಚಿಕಿತ್ಸೆ ಮುಂದುವರಿದಿದ್ದು, ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.



