Breaking
8 Jul 2026, Wed

ಚಾರ್ಮಾಡಿ ಘಾಟಿಯಲ್ಲಿ ದಟ್ಟ ಮಂಜು; ರಸ್ತೆ ಕಾಣದೆ ಕಾರು ಪಲ್ಟಿ, ಪ್ರಯಾಣಿಕರು ಅಪಾಯದಿಂದ ಪಾರು

ಬೆಳ್ತಂಗಡಿ: ಚಾರ್ಮಾಡಿ ಘಾಟಿಯುದ್ದಕ್ಕೂ ದಟ್ಟ ಮಂಜು ಆವರಿಸಿರುವ ಹಿನ್ನೆಲೆಯಲ್ಲಿ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ರಸ್ತೆ ಸ್ಪಷ್ಟವಾಗಿ ಕಾಣದ ಕಾರಣ, ಚಾರ್ಮಾಡಿ ಘಾಟಿನ ಪ್ರಸಿದ್ಧ ಮಲೆಯ ಮಾರುತ ಪ್ರವಾಸಿ ಮಂದಿರದ ಸಮೀಪ ಕಾರೊಂದು ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ನಡೆದಿದೆ.


ಅದೃಷ್ಟವಶಾತ್ ಕಾರಿನಲ್ಲಿದ್ದ ಪ್ರಯಾಣಿಕರು ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ. ಸ್ಥಳೀಯರು ಹಾಗೂ ಇತರ ವಾಹನ ಸವಾರರ ನೆರವಿನಿಂದ ಕಾರನ್ನು ತೆರವುಗೊಳಿಸಲಾಗಿದೆ.


ಇದೇ ವೇಳೆ, ನಿರಂತರ ಸುರಿಯುತ್ತಿರುವ ಭಾರಿ ಮಳೆಯಿಂದ ಘಾಟಿಯ ಮೇಲ್ಭಾಗದಿಂದ ನೀರು ರಭಸವಾಗಿ ಹರಿಯುತ್ತಿದ್ದು, ಗುಡ್ಡದ ಮಣ್ಣು ಸಡಿಲಗೊಳ್ಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಮಳೆ ಇದೇ ರೀತಿ ಮುಂದುವರಿದರೆ ಗುಡ್ಡ ಕುಸಿತ ಹಾಗೂ ಮರಗಳು ರಸ್ತೆ ಮೇಲೆ ಬೀಳುವ ಸಾಧ್ಯತೆ ಹೆಚ್ಚಿದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.


ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಇಲಾಖೆ ಹಾಗೂ ಅರಣ್ಯ ಇಲಾಖೆ ಕಟ್ಟೆಚ್ಚರ ವಹಿಸಿದ್ದು, ಪರಿಸ್ಥಿತಿಯನ್ನು ನಿರಂತರವಾಗಿ ಪರಿಶೀಲಿಸುತ್ತಿವೆ. ಪ್ರತಿದಿನ ಸಾವಿರಾರು ವಾಹನಗಳು ಸಂಚರಿಸುವ ಚಾರ್ಮಾಡಿ ಘಾಟಿ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ವೇಗ ನಿಯಂತ್ರಿಸಿ, ಹೆಡ್ಲೈಟ್ಗಳನ್ನು ಬಳಸಿಕೊಂಡು ಅತ್ಯಂತ ಎಚ್ಚರಿಕೆಯಿಂದ ವಾಹನ ಚಾಲನೆ ಮಾಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *