Breaking
7 Jul 2026, Tue

ಬೆಳ್ತಂಗಡಿ: ಬೈಕ್–ಗೂಡ್ಸ್ ಆಟೋರಿಕ್ಷಾ ಅಪಘಾತ: ಓರ್ವ ಸಾವು, ಮತ್ತೋರ್ವ ಗಂಭೀರ ಗಾಯ

ಬೆಳ್ತಂಗಡಿ: ತಾಲೂಕಿನ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ನಿಟ್ಟಡೆ ಸಮೀಪ ಗೂಡ್ಸ್ ಆಟೋರಿಕ್ಷಾ ಮತ್ತು ಬೈಕ್ ನಡುವೆ ಜುಲೈ 5ರ ರಾತ್ರಿ ಡಿಕ್ಕಿ ಸಂಭವಿಸಿದೆ.

ಅಪಘಾತದಲ್ಲಿ ವೇಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕರಿಮಣೇಲು ಗ್ರಾಮದ ಗಾಂಧಿನಗರದ ತಿಮರಡ್ಡ ಮನೆಯ ನಿವಾಸಿ 47 ವರ್ಷದ ರವೀಂದ್ರ ಮೂಲ್ಯ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅವರ ಸಹೋದರ ಜಗದೀಶ್ ಮೂಲ್ಯ ಅವರ ಕಾಲಿಗೆ ಗಂಭೀರವಾಗಿ ಗಾಯಗೊಂಡಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಬ್ಬರೂ ಮೇಸ್ತ್ರಿ ಕೆಲಸ ಮುಗಿಸಿ ಗುರುವಾಯನಕೆರೆಯಿಂದ ವೇಣೂರಿಗೆ ಬೈಕ್‌ನಲ್ಲಿ ಹಿಂದಿರುಗುತ್ತಿದ್ದ ವೇಳೆ, ನಿಟ್ಟಡೆಯ ಕುಂಭಶ್ರೀ ಶಾಲೆ ಸಮೀಪ ಅಪಘಾತ ಸಂಭವಿಸಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಹೆದ್ದಾರಿಯಲ್ಲಿದ್ದ ಸಣ್ಣ ಗುಂಡಿಯನ್ನು ತಪ್ಪಿಸಲು ಗೂಡ್ಸ್ ಆಟೋರಿಕ್ಷಾ ವಿರುದ್ಧ ದಿಕ್ಕಿಗೆ ಬಂದಿದ್ದು, ಬೈಕ್‌ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಡಿಕ್ಕಿಯ ತೀವ್ರತೆಗೆ ರವೀಂದ್ರ ಮೂಲ್ಯ ಅವರ ತಲೆಗೆ ಗಂಭೀರ ಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟರೆ, ಜಗದೀಶ್ ಮೂಲ್ಯ ಅವರನ್ನು ಆಟೋರಿಕ್ಷಾ ಚಾಲಕ ಹಾಗೂ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಈ ಕುರಿತು ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತದ ನಿಖರ ಕಾರಣದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *