ಉಡುಪಿ: ಜಿಲ್ಲೆಯ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಭಕ್ತೆಯೊಬ್ಬರ ವ್ಯಾನಿಟಿ ಬ್ಯಾಗ್‌ನಿಂದ ₹80,000 ನಗದು ಕಳವು ಮಾಡಿದ ಪ್ರಕರಣವನ್ನು ಕೊಲ್ಲೂರು ಪೊಲೀಸರು ಕೇವಲ 24 ಗಂಟೆಗಳಲ್ಲೇ ಭೇದಿಸಿ ಮೂವರು ಮಹಿಳೆಯರನ್ನು ಬಂಧಿಸಿದ್ದಾರೆ.

ಬಂಧಿತರು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಮೂಲದ ನೇತ್ರಾವತಿ (33), ಶಾರದಾ (50) ಮತ್ತು ದುರ್ಗಮ್ಮ (44) ಎಂದು ಗುರುತಿಸಲಾಗಿದೆ.

ಜುಲೈ 5ರಂದು ನಿಮಿಷಾ ಹಾಗೂ ಅವರ ಪತಿ ಪ್ರಜೋಶ್ ಅವರು ಶ್ರೀ ಮೂಕಾಂಬಿಕಾ ದೇವಿಯ ದರ್ಶನಕ್ಕೆ ದೇವಸ್ಥಾನಕ್ಕೆ ಆಗಮಿಸಿದ್ದರು. ಬೆಳಿಗ್ಗೆ ಸುಮಾರು 8.20ಕ್ಕೆ ದೇವಾಲಯದ ಆವರಣದಿಂದ ಹೊರಬಂದ ವೇಳೆ ನಿಮಿಷಾ ಅವರ ವ್ಯಾನಿಟಿ ಬ್ಯಾಗ್‌ನ ಜಿಪ್ ತೆರೆದಿರುವುದು ಗಮನಕ್ಕೆ ಬಂದಿದೆ. ಪರಿಶೀಲಿಸಿದಾಗ ಬ್ಯಾಗ್‌ನಲ್ಲಿದ್ದ ₹80,000 ನಗದು ಹೊಂದಿದ್ದ ಪರ್ಸ್ ಕಳ್ಳತನವಾಗಿರುವುದು ತಿಳಿದುಬಂದಿದೆ.

ದೇವಸ್ಥಾನದ ಸುತ್ತಮುತ್ತ ಹುಡುಕಾಟ ನಡೆಸಿದರೂ ಪರ್ಸ್ ಪತ್ತೆಯಾಗದ ಹಿನ್ನೆಲೆಯಲ್ಲಿ ನಿಮಿಷಾ ಅವರು ಕೊಲ್ಲೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಿಸಿಟಿವಿ ದೃಶ್ಯಾವಳಿ, ಸಾರ್ವಜನಿಕರು ಸೆರೆಹಿಡಿದ ಛಾಯಾಚಿತ್ರಗಳು ಹಾಗೂ ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳನ್ನು ಪತ್ತೆಹಚ್ಚಿ 24 ಗಂಟೆಯೊಳಗೆ ಬಂಧಿಸಿದ್ದಾರೆ.

ಬಂಧಿತ ಮೂವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಪೊಲೀಸರ ಮಾಹಿತಿ ಪ್ರಕಾರ, ದುರ್ಗಮ್ಮ ವಿರುದ್ಧ ಮೈಸೂರಿನ ಲಷ್ಕರ್ ಪೊಲೀಸ್ ಠಾಣೆ ಹಾಗೂ ಭದ್ರಾವತಿಯ ಓಲ್ಡ್ ಟೌನ್ ಪೊಲೀಸ್ ಠಾಣೆಯಲ್ಲಿ ತಲಾ ಒಂದು ಕಳ್ಳತನ ಪ್ರಕರಣ ದಾಖಲಾಗಿದೆ. ಶಾರದಾ ವಿರುದ್ಧ ಬೆಂಗಳೂರು ನಗರ ರೈಲ್ವೆ ಪೊಲೀಸ್ ಠಾಣೆಯಲ್ಲಿ ಎರಡು ಹಾಗೂ ಮೈಸೂರಿನ ಅಶೋಕಪುರಂ ಪೊಲೀಸ್ ಠಾಣೆಯಲ್ಲಿ ಒಂದು ಸೇರಿದಂತೆ ಒಟ್ಟು ಮೂರು ಕಳ್ಳತನ ಪ್ರಕರಣಗಳು ದಾಖಲಾಗಿವೆ.


