ಸಿದ್ದಾಪುರ: ಮನೆಯ ಬಾವಿಗೆ ಅಳವಡಿಸಿದ್ದ ಮೋಟರ್ ಪಂಪ್ ಅನ್ನು ಮೇಲಕ್ಕೆ ಎತ್ತಲು ಹೋಗಿದ್ದ ವೇಳೆ ಕಾಲು ಜಾರಿ ಬಾವಿಗೆ ಬಿದ್ದ ಕೃಷಿಕರೊಬ್ಬರು ಮೃತಪಟ್ಟ ಘಟನೆ ಜು. 4ರಂದು ಅಲ್ಬಾಡಿ ಗ್ರಾಮದಲ್ಲಿ ನಡೆದಿದೆ.

ಮೃತರನ್ನು ಅಲ್ಬಾಡಿ ಗ್ರಾಮದ ಲಕ್ಷ್ಮಣ ನಾಯ್ಕ್ (61) ಎಂದು ಗುರುತಿಸಲಾಗಿದೆ.

ಕಳೆದ ಕೆಲವು ದಿನಗಳಿಂದ ಸುರಿದ ಮಳೆಯಿಂದ ಬಾವಿಯ ನೀರಿನ ಮಟ್ಟ ಏರಿಕೆಯಾಗಿತ್ತು. ಇದರಿಂದ ಬಾವಿಗೆ ಅಳವಡಿಸಿದ್ದ ಪಂಪ್ ಸೆಟ್ ಅನ್ನು ಮೇಲಕ್ಕೆ ಎತ್ತಲು ಜು. 4ರ ಮಧ್ಯಾಹ್ನ ಲಕ್ಷ್ಮಣ ನಾಯ್ಕ್ ಒಬ್ಬರೇ ಬಾವಿಯ ಬಳಿ ತೆರಳಿದ್ದರು. ಸಂಜೆ ಆದರೂ ಮನೆಗೆ ಮರಳದ ಹಿನ್ನೆಲೆಯಲ್ಲಿ ಕುಟುಂಬದವರು ಹುಡುಕಾಟ ನಡೆಸಿದರು.

ಬಾವಿಯ ಬಳಿ ತೆರಳಿದಾಗ ನೀರಿನಲ್ಲಿ ಅವರ ಚಪ್ಪಲಿ ತೇಲುತ್ತಿರುವುದು ಕಂಡು ಅನುಮಾನಗೊಂಡ ಸ್ಥಳೀಯರು ಬಾವಿಯಲ್ಲಿ ಪರಿಶೀಲನೆ ನಡೆಸಿದ ವೇಳೆ ಲಕ್ಷ್ಮಣ ನಾಯ್ಕ್ ಅವರ ಮೃತದೇಹ ಪತ್ತೆಯಾಯಿತು.

ಈ ಸಂಬಂಧ ಮೃತರ ಪುತ್ರ ಪುಟ್ಟಯ್ಯ ನಾಯ್ಕ್ ನೀಡಿದ ದೂರಿನ ಮೇರೆಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


