Breaking
6 Jul 2026, Mon

ಕಡಬ: ಬ್ಯಾಂಕ್‌ಗೆ ಮೋಸ ಮಾಡಲು ಸಂಚು; ನಕಲಿ ತೂಕದ ಆಭರಣಗಳೊಂದಿಗೆ ಇಬ್ಬರ ಬಂಧನ

ಕಡಬ: ಆಭರಣಗಳ ತೂಕವನ್ನು ಕೃತಕವಾಗಿ ಹೆಚ್ಚಿಸಿ ಬ್ಯಾಂಕ್‌ನಲ್ಲಿ ಅಡವಿಟ್ಟು ಮೋಸ ಮಾಡಿ ಹಣ ಪಡೆಯಲು ಸಂಚು ರೂಪಿಸಿದ್ದ ಆರೋಪದಡಿ ಇಬ್ಬರನ್ನು ಕಡಬ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಜುಲೈ 3ರಂದು ಸಂಜೆ ಕಡಬ ಪೇಟೆಯಲ್ಲಿ ಇಬ್ಬರು ವ್ಯಕ್ತಿಗಳು ಸಂಶಯಾಸ್ಪದವಾಗಿ ಓಡಾಡುತ್ತಿರುವ ಕುರಿತು ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. ಮಾಹಿತಿ ಆಧರಿಸಿ ಸ್ಥಳಕ್ಕೆ ತೆರಳಿದ ಪೊಲೀಸರು ಅವರನ್ನು ವಿಚಾರಿಸಿದಾಗ, ಬ್ಯಾಂಕ್‌ನಲ್ಲಿ ಸುಮಾರು 120 ಗ್ರಾಂ ಚಿನ್ನವನ್ನು ಅಡವಿಡಲು ಬಂದಿರುವುದಾಗಿ ತಿಳಿಸಿದ್ದಾರೆ.

ಇಬ್ಬರ ವರ್ತನೆಯಿಂದ ಅನುಮಾನಗೊಂಡ ಪೊಲೀಸರು ಹೆಚ್ಚಿನ ವಿಚಾರಣೆಗಾಗಿ ಠಾಣೆಗೆ ಕರೆತಂದರು. ವಿಚಾರಣೆಯಲ್ಲಿ ಅವರು ಉಪ್ಪಿನಂಗಡಿ ನಿವಾಸಿ ಮಹಮ್ಮದ್ ಫಾಯಿಝ್ (20) ಹಾಗೂ ಬಂಟ್ವಾಳ ಕಸಬಾ ನಿವಾಸಿ ಮೊಹಮ್ಮದ್ ಮುರ್ಷೀದ್ (45) ಎಂದು ಗುರುತಿಸಲಾಗಿದೆ.

ಅವರ ಬಳಿಯಿದ್ದ ಆಭರಣಗಳ ಕುರಿತು ದಾಖಲೆಗಳನ್ನು ಕೇಳಿದಾಗ ಯಾವುದೇ ದಾಖಲೆಗಳನ್ನು ಸಲ್ಲಿಸಲು ವಿಫಲರಾಗಿದ್ದು, ಸಮರ್ಪಕ ಮಾಹಿತಿಯನ್ನೂ ನೀಡಲಿಲ್ಲ. ಬಳಿಕ ನಡೆಸಿದ ಸುದೀರ್ಘ ವಿಚಾರಣೆಯಲ್ಲಿ ಆಭರಣಗಳ ತೂಕವನ್ನು ಕೃತಕವಾಗಿ ಹೆಚ್ಚಿಸಿ ಬ್ಯಾಂಕ್‌ನಲ್ಲಿ ಅಡವಿಟ್ಟು ಬ್ಯಾಂಕ್‌ಗೆ ಮೋಸ ಮಾಡಿ ಹಣ ಪಡೆಯುವ ಉದ್ದೇಶದಿಂದ ಬಂದಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಕಡಬ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 83/2026, ಕಲಂ: 318(4) ಹಾಗೂ 62 BNS-2023ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.

Leave a Reply

Your email address will not be published. Required fields are marked *