Breaking
24 Oct 2026, Sat

ಬಂಟ್ವಾಳದಲ್ಲಿ ಕೌಟುಂಬಿಕ ಕಲಹಕ್ಕೆ ಪತ್ನಿ ಬಲಿ? ಪತಿಯ ವಿರುದ್ಧ ಕೊಲೆ ಆರೋಪ

ಬಂಟ್ವಾಳ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿಯೇ ಪತ್ನಿಗೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿರುವುದಾಗಿ ಆರೋಪಿಸಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ ನಿವಾಸಿ ಅರುಣ್ ಮಹಾದೇವ್ ದೇಸಂಗಿ (26) ನೀಡಿದ ದೂರಿನಂತೆ, ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಿವಾಸಿ ಸಂಜೀವಕುಮಾರ್ (36) ಆರೋಪಿಯಾಗಿದ್ದಾನೆ. ಮೃತ ಮಹಿಳೆ ಸುನೀತಾ ಮಹಾದೇವ್ ದೇಸಂಗಿ (34) ಆರೋಪಿಯ ಪತ್ನಿಯಾಗಿದ್ದು, ದಂಪತಿ ಬಂಟ್ವಾಳದ ವಗ್ಗದಲ್ಲಿ ವಾಸವಾಗಿದ್ದರು.


ದಂಪತಿ ನಡುವೆ ವೈವಾಹಿಕ ಕಲಹ ಉಂಟಾಗಿದ್ದ ಹಿನ್ನೆಲೆಯಲ್ಲಿ ಸಂಬಂಧಿಕರು ಮಧ್ಯಸ್ಥಿಕೆ ವಹಿಸಿ ರಾಜಿ ಸಂಧಾನ ನಡೆಸಿದ್ದರು. ಹೆರಿಗೆಯ ಬಳಿಕ ತವರು ಮನೆಯಲ್ಲಿದ್ದ ಸುನೀತಾ ಅವರನ್ನು ಆರೋಪಿಯು ಅಕ್ಟೋಬರ್ 4ರಂದು ಬಂಟ್ವಾಳದ ಮನೆಗೆ ಕರೆದುಕೊಂಡು ಬಂದಿದ್ದನು ಎನ್ನಲಾಗಿದೆ.
ಅಕ್ಟೋಬರ್ 22ರಂದು ಸುನೀತಾ ತನ್ನ ಸಹೋದರ ಅರುಣ್ ಅವರಿಗೆ ಕರೆ ಮಾಡಿ, ಪತಿ ಕಿರುಕುಳ ನೀಡುತ್ತಿದ್ದು, ಹಲ್ಲೆ ನಡೆಸುತ್ತಿರುವುದಾಗಿ ತಿಳಿಸಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.


ಅಕ್ಟೋಬರ್ 23ರ ಮುಂಜಾನೆ ಸಂಜೀವಕುಮಾರ್ ಅರುಣ್ ಅವರಿಗೆ ಕರೆ ಮಾಡಿ, ಸುನೀತಾ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಆಸ್ಪತ್ರೆಗೆ ದಾಖಲಿಸುತ್ತಿರುವುದಾಗಿ ತಿಳಿಸಿದ್ದಾನೆ. ಬಳಿಕ ಸ್ಥಳಕ್ಕೆ ಬಂದ ಅರುಣ್ ಪರಿಶೀಲಿಸಿದಾಗ ಸುನೀತಾ ಮೃತಪಟ್ಟಿರುವುದು ಕಂಡುಬಂದಿದೆ. ಮೃತದೇಹದ ಮೇಲೆ ಹಲ್ಲೆಯ ಗಾಯಗಳು ಹಾಗೂ ರಕ್ತದ ಗುರುತುಗಳು ಕಂಡುಬಂದಿದ್ದವು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಅಕ್ಟೋಬರ್ 22ರ ರಾತ್ರಿ ಹಾಗೂ ಅಕ್ಟೋಬರ್ 23ರ ಮುಂಜಾನೆಯ ನಡುವೆ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಸಂಜೀವಕುಮಾರ್ ಪತ್ನಿ ಸುನೀತಾ ಅವರಿಗೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.


ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 142/2026ರಂತೆ ಭಾರತೀಯ ನ್ಯಾಯ ಸಂಹಿತೆ (BNS), 2023ರ ಕಲಂ 103ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *