ಗಂಗೊಳ್ಳಿ: ಮರವಂತೆಯ ರಾಷ್ಟ್ರೀಯ ಹೆದ್ದಾರಿ ಸಮೀಪದ ಜುವೆಲರ್ಸ್ ಅಂಗಡಿಯೊಂದರ ಶಟರ್ ಅನ್ನು ಗ್ಯಾಸ್ ಕಟರ್ ಬಳಸಿ ಮುರಿದು ಒಳನುಗ್ಗಿದ ಕಳ್ಳರು ಸುಮಾರು ₹1.45 ಲಕ್ಷ ಮೌಲ್ಯದ ಬೆಳ್ಳಿ ಹಾಗೂ ನಗದು ಕಳವು ಮಾಡಿ ಪರಾರಿಯಾದ ಘಟನೆ ಜುಲೈ 4ರ ರಾತ್ರಿ ಹಾಗೂ ಜುಲೈ 5ರ ಬೆಳಗಿನ ಜಾವದ ನಡುವೆ ನಡೆದಿದೆ.

ಮರವಂತೆ ಗ್ರಾಮದ ಮಾರುತಿ ಕಾಂಪ್ಲೆಕ್ಸ್‌ನಲ್ಲಿರುವ ವಿಶ್ವನಾಥ ಬಿಲ್ಲವ ಅವರ ಜುವೆಲರ್ಸ್ ಅಂಗಡಿಯಲ್ಲಿ ಈ ಕಳ್ಳತನ ನಡೆದಿದೆ.
ಜುಲೈ 4ರ ರಾತ್ರಿ ಸುರಿದ ಭಾರೀ ಮಳೆಯನ್ನು ದುರುಪಯೋಗಪಡಿಸಿಕೊಂಡ ಕಳ್ಳರು, ಗ್ಯಾಸ್ ಕಟರ್ ಬಳಸಿ ಅಂಗಡಿಯ ಶಟರ್ ಕತ್ತರಿಸಿ ಒಳ ಪ್ರವೇಶಿಸಿದ್ದಾರೆ. ಬಳಿಕ ಡ್ರಾವರ್ ಹಾಗೂ ಕ್ಯಾಬಿನ್‌ನಲ್ಲಿದ್ದ ಸುಮಾರು 600 ಗ್ರಾಂ ಬೆಳ್ಳಿ ಗಟ್ಟಿ (ಅಂದಾಜು ₹1.44 ಲಕ್ಷ ಮೌಲ್ಯ) ಹಾಗೂ ₹1,000 ನಗದನ್ನು ಕಳವು ಮಾಡಿ ಪರಾರಿಯಾಗಿದ್ದಾರೆ.

ಕಳ್ಳತನಕ್ಕೂ ಮುನ್ನ ಸುತ್ತಮುತ್ತಲಿನ ಅಂಗಡಿಗಳ ಸಿಸಿಟಿವಿ ಕ್ಯಾಮೆರಾಗಳಿಗೆ ಹಾನಿ ಉಂಟುಮಾಡಿರುವುದಾಗಿ ತಿಳಿದುಬಂದಿದೆ. ಈ ಸಂಬಂಧ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಜುಲೈ 5ರ ಭಾನುವಾರ ಸ್ಥಳಕ್ಕೆ ಕುಂದಾಪುರ ಡಿವೈಎಸ್ಪಿ ಎಚ್.ಡಿ. ಕುಲಕರ್ಣಿ, ಬೈಂದೂರು ಪೊಲೀಸ್ ವೃತ್ತ ನಿರೀಕ್ಷಕ ಶಿವಕುಮಾರ್, ಗಂಗೊಳ್ಳಿ ಠಾಣೆಯ ಉಪನಿರೀಕ್ಷಕರಾದ ಪವನ್ ನಾಯಕ್, ಸುದರ್ಶನ್ ಹಾಗೂ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಾಂತ್ರಿಕ ಮತ್ತು ಬೆರಳಚ್ಚು ತಜ್ಞರ ತಂಡವೂ ಸ್ಥಳ ಪರಿಶೀಲಿಸಿ ಅಗತ್ಯ ಮಾಹಿತಿ ಸಂಗ್ರಹಿಸಿದೆ.

ಗ್ಯಾಸ್ ಕಟರ್ ಬಳಸಿ ಶಟರ್ ಕತ್ತರಿಸಿರುವುದು, ಸಿಸಿಟಿವಿ ಕ್ಯಾಮೆರಾಗಳನ್ನು ಹಾನಿಗೊಳಿಸಿರುವುದು ಹಾಗೂ ಭಾರೀ ಮಳೆಯ ಸಮಯವನ್ನೇ ಕೃತ್ಯಕ್ಕೆ ಆಯ್ಕೆ ಮಾಡಿಕೊಂಡಿರುವುದನ್ನು ಗಮನಿಸಿದರೆ, ಇದು ವೃತ್ತಿಪರ ಕಳ್ಳರ ಕೃತ್ಯವಾಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಆದರೆ ಘಟನೆಯ ಹಿಂದಿನ ನಿಖರ ಸತ್ಯ ಪೊಲೀಸ್ ತನಿಖೆಯಿಂದಷ್ಟೇ ತಿಳಿಯಬೇಕಿದೆ.



