ಮುದ್ದೇಬಿಹಾಳ: ತಾಲೂಕಿನ ಪ್ರಸಿದ್ಧ ಸುಕ್ಷೇತ್ರ ಬಸರಕೋಡ ಗ್ರಾಮದ ಶ್ರೀ ಪವಾಡ ಬಸವೇಶ್ವರ ದೇವಸ್ಥಾನದಲ್ಲಿ ಜುಲೈ 6ರ ಸೋಮವಾರ ಮುಂಜಾನೆ ಭಾರೀ ಕಳ್ಳತನ ನಡೆದಿದ್ದು, ಅಂದಾಜು ₹1.20 ಕೋಟಿ ಮೌಲ್ಯದ 60 ಕೆಜಿಗೂ ಅಧಿಕ ತೂಕದ ಬೆಳ್ಳಿ ಮೂರ್ತಿ ಹಾಗೂ ಪೂಜಾ ಪರಿಕರಗಳನ್ನು ಕಳ್ಳರು ದೋಚಿರುವ ಘಟನೆ ಬೆಳಕಿಗೆ ಬಂದಿದೆ.

ಕಳ್ಳರು ದೇವರ 35 ಕೆಜಿ ತೂಕದ ಬೆಳ್ಳಿಯ ಮುಖ ಕವಚ, ನಿತ್ಯ ಪೂಜೆಗೆ ಬಳಸಲಾಗುತ್ತಿದ್ದ 10 ಕೆಜಿ ತೂಕದ ಬೆಳ್ಳಿ ಮೂರ್ತಿ ಸೇರಿದಂತೆ ಒಟ್ಟು 60 ಕೆಜಿಗೂ ಅಧಿಕ ತೂಕದ ಬೆಳ್ಳಿ ಪೂಜಾ ಸಾಮಗ್ರಿಗಳನ್ನು ಕಳವು ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಕಳುವಾಗಿರುವ 35 ಕೆಜಿ ತೂಕದ ಬೆಳ್ಳಿಯ ಮುಖ ಕವಚವನ್ನು ಮಾಜಿ ಶಾಸಕ ಹಾಗೂ ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್. ಪಾಟೀಲ ನಡಹಳ್ಳಿ ಅವರು ದೇವಸ್ಥಾನಕ್ಕೆ ಭಕ್ತಿಯಿಂದ ದಾನವಾಗಿ ನೀಡಿದ್ದರು.

ಘಟನೆಯ ವೇಳೆ ದೇವಸ್ಥಾನದಲ್ಲೇ ಸಾಧು-ಸಂತರು ಮಲಗಿದ್ದರೂ ಕಳ್ಳತನ ನಡೆದಿರುವುದು ಗಮನಾರ್ಹವಾಗಿದೆ. ಅಲ್ಲದೆ, ಕಳ್ಳತನ ನಡೆದ ಸಮಯದಲ್ಲಿ ದೇವಸ್ಥಾನದ ಸಿಸಿಟಿವಿ ಕ್ಯಾಮೆರಾಗಳು ನಿಷ್ಕ್ರಿಯಗೊಂಡಿದ್ದವು ಎಂಬ ಮಾಹಿತಿ ಲಭ್ಯವಾಗಿದ್ದು, ಕಳ್ಳರು ಪೂರ್ವಯೋಜಿತವಾಗಿ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.

ಘಟನಾ ಸ್ಥಳಕ್ಕೆ ಮುದ್ದೇಬಿಹಾಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಕಳ್ಳರ ಪತ್ತೆಗೆ ತನಿಖೆ ಆರಂಭಿಸಿದ್ದಾರೆ.



