Breaking
6 Jul 2026, Mon

ಉಡುಪಿ: ಸಿಟಿ ಬಸ್ ನಿಲ್ದಾಣದಲ್ಲಿ ಟೈಮಿಂಗ್‌ ವಿವಾದ: ಖಾಸಗಿ ಬಸ್‌ ಚಾಲಕ-ನಿರ್ವಾಹಕರ ನಡುವೆ ಜಟಾಪಟಿ, ದೂರು ದಾಖಲು

ಉಡುಪಿ: ನಗರದ ಸಿಟಿ ಬಸ್‌ ನಿಲ್ದಾಣದಲ್ಲಿ ಟೈಮಿಂಗ್‌ ವಿಚಾರವಾಗಿ ಎರಡು ಖಾಸಗಿ ಬಸ್‌ಗಳ ಚಾಲಕ ಹಾಗೂ ನಿರ್ವಾಹಕರ ನಡುವೆ ವಾಗ್ವಾದ ನಡೆದು, ಬಳಿಕ ಜಟಾಪಟಿಗೆ ತಿರುಗಿದ ಘಟನೆ ಸಂಬಂಧ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಲ್ಪೆ ಬಡನಿಡಿಯೂರಿನ ಕೆ. ವೈಭವ್‌ ಪೈ ಅವರು ನೀಡಿದ ದೂರಿನ ಪ್ರಕಾರ, ಜುಲೈ 4ರಂದು ರಾತ್ರಿ 9.15ರ ಸುಮಾರಿಗೆ ಅವರು ಚಾಲನೆ ಮಾಡುತ್ತಿದ್ದ ಖಾಸಗಿ ಬಸ್‌ ಉಡುಪಿಯಿಂದ ಕೆಮ್ಮಣ್ಣು–ಹೂಡೆ ಮಾರ್ಗಕ್ಕೆ ಹೊರಡಲು ಸಿಟಿ ಬಸ್‌ ನಿಲ್ದಾಣದಲ್ಲಿ ನಿಂತಿತ್ತು. ಇದೇ ವೇಳೆ ಮತ್ತೊಂದು ಖಾಸಗಿ ಬಸ್‌ನ ಚಾಲಕ ತನ್ನ ಬಸ್‌ ಅನ್ನು ವೈಭವ್‌ ಅವರ ಬಸ್‌ನ ಎದುರು ತಂದು ನಿಲ್ಲಿಸಿದ್ದಾನೆ ಎನ್ನಲಾಗಿದೆ.

8.53ಕ್ಕೆ ಹೊರಡಬೇಕಿದ್ದ ಬಸ್‌ ರಾತ್ರಿ 9 ಗಂಟೆಯಾದರೂ ಹೊರಡದಿದ್ದಾಗ, ಇನ್ನೊಂದು ಬಸ್‌ನ ನಿರ್ವಾಹಕರು ಕಾರಣ ಕೇಳಿದ್ದಾರೆ. ಆಗ ಬಸ್‌ ತಾಂತ್ರಿಕ ದೋಷದಿಂದ ಸ್ಟಾರ್ಟ್‌ ಆಗುತ್ತಿಲ್ಲ ಹಾಗೂ ಹೂಡೆಗೆ ತೆರಳುವುದಿಲ್ಲ ಎಂದು ತಿಳಿಸಲಾಗಿದೆ. ಈ ವಿಚಾರವಾಗಿ ಎರಡೂ ಬಸ್‌ಗಳ ಚಾಲಕರು ಹಾಗೂ ನಿರ್ವಾಹಕರ ನಡುವೆ ಮಾತಿನ ಚಕಮಕಿ ನಡೆದಿದೆ.

ದೂರಿನ ಪ್ರಕಾರ, ಮತ್ತೊಂದು ಬಸ್‌ನ ಚಾಲಕ ಸಲ್ಮಾನ್‌ ಉದ್ದೇಶಪೂರ್ವಕವಾಗಿ ವೈಭವ್‌ ಅವರ ಬಸ್‌ ಮುಂದೆ ತಡೆದು ನಿಲ್ಲಿಸಿ, ಬಸ್‌ನ ಎಡಭಾಗಕ್ಕೆ ಎರಡು ಬಾರಿ ಢಿಕ್ಕಿ ಹೊಡೆದ ಪರಿಣಾಮ ಸುಮಾರು ₹1.50 ಲಕ್ಷ ಮೌಲ್ಯದ ಹಾನಿಯಾಗಿದೆ ಎಂದು ಆರೋಪಿಸಲಾಗಿದೆ.

ಇದಲ್ಲದೆ, ನಿರ್ವಾಹಕರಾದ ರೋಷನ್‌, ಶಾರುಖ್‌, ಅಫ್ರೋಜ್‌ ಹಾಗೂ ನವಾಜ್‌ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಸಂಬಂಧ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *