ಬ್ರಹ್ಮಾವರ: ಧರ್ಮಾವರಂ ಆಡಿಟೋರಿಯಂ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಮಧ್ಯಾಹ್ನ ಮೀನು ಸಾಗಣೆ ಮಾಡುತ್ತಿದ್ದ ಪಿಕ್‌ಅಪ್ ವಾಹನ ಹಾಗೂ ಕಾರಿನ ನಡುವೆ ಅಪಘಾತ ಸಂಭವಿಸಿದೆ.

ಕುಂದಾಪುರ ಕಡೆಯಿಂದ ಬ್ರಹ್ಮಾವರದತ್ತ ಸಂಚರಿಸುತ್ತಿದ್ದ ಕಾರಿಗೆ ಹಿಂದಿನಿಂದ ಬಂದ ಪಿಕ್‌ಅಪ್ ವಾಹನ ಢಿಕ್ಕಿ ಹೊಡೆದ ಪರಿಣಾಮ, ಚಾಲಕನ ನಿಯಂತ್ರಣ ತಪ್ಪಿ ಪಿಕ್‌ಅಪ್ ಪಲ್ಟಿಯಾಗಿದೆ.

ಅಪಘಾತದ ಪರಿಣಾಮ ವಾಹನದಲ್ಲಿದ್ದ ಮೀನುಗಳು ರಸ್ತೆಯೆಲ್ಲ ಚದುರಿಬಿದ್ದಿದ್ದು, ಕೆಲಕಾಲ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು. ಈ ಮೀನುಗಳನ್ನು ಮಲ್ಪೆ ಕಡೆಗೆ ಸಾಗಿಸಲಾಗುತ್ತಿತ್ತು ಎಂದು ತಿಳಿದುಬಂದಿದೆ.

ಅದೃಷ್ಟವಶಾತ್, ಎರಡೂ ವಾಹನಗಳಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿದ್ದು, ಬಳಿಕ ಸಂಚಾರವನ್ನು ಪೊಲೀಸರು ಸುಗಮಗೊಳಿಸಿದರು.



