Breaking
21 Aug 2026, Fri

ಉಚ್ಚಿಲ ಕಡಲತೀರಕ್ಕೆ ತೇಲಿ ಬಂದ ಮುಳುಗಿದ್ದ ಮೀನುಗಾರಿಕಾ ದೋಣಿ

ಉಡುಪಿ: ಸಮುದ್ರದಲ್ಲಿ ನೀರು ತುಂಬಿಕೊಂಡು ಅಪಘಾತಕ್ಕೀಡಾಗಿದ್ದ ಮಲ್ಪೆ ನೋಂದಣಿಯ ‘ಮಂಜು ಮಾತಾ’ ಗಿಲ್‌ನೆಟ್ ಮೀನುಗಾರಿಕಾ ದೋಣಿ ಜು. 3ರ ಶುಕ್ರವಾರ ಸಂಜೆ ಉಚ್ಚಿಲ ಕಡಲತೀರಕ್ಕೆ ಕೊಚ್ಚಿಕೊಂಡು ಬಂದಿದೆ.

ಜೂನ್ 29ರಂದು ಬೆಳಿಗ್ಗೆ ಮಲ್ಪೆ ಮೀನುಗಾರಿಕಾ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ದೋಣಿಯ ತಳಭಾಗದಲ್ಲಿ ಮಧ್ಯಾಹ್ನ ಸೋರಿಕೆ ಕಾಣಿಸಿಕೊಂಡು ನೀರು ಒಳನುಗ್ಗತೊಡಗಿತ್ತು. ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ಮೀನುಗಾರರು ಭಾರತೀಯ ಕರಾವಳಿ ಕಾವಲು ಪಡೆಗೆ ಮಾಹಿತಿ ನೀಡಿದ್ದು, ತಕ್ಷಣ ಧಾವಿಸಿದ ಸಿಬ್ಬಂದಿ ದೋಣಿಯಲ್ಲಿದ್ದ ಆರು ಮಂದಿ ಮೀನುಗಾರರನ್ನು ಸುರಕ್ಷಿತವಾಗಿ ರಕ್ಷಿಸಿದ್ದರು. ಆದರೆ ದೋಣಿಯನ್ನು ಮೇಲಕ್ಕೆತ್ತಲು ಸಾಧ್ಯವಾಗದ ಕಾರಣ ಅದನ್ನು ಸಮುದ್ರದಲ್ಲೇ ಬಿಡಲಾಗಿತ್ತು.

ಬಳಿಕ ನವ ಮಂಗಳೂರು ಬಂದರು ಪ್ರಾಧಿಕಾರದಲ್ಲಿ ಕರಾವಳಿ ಭದ್ರತಾ ಪೊಲೀಸ್ ಠಾಣೆ, ಮೀನುಗಾರಿಕಾ ಇಲಾಖೆ, ವಲಸೆ ಇಲಾಖೆ ಹಾಗೂ ಸ್ಥಳೀಯ ಪೊಲೀಸರು ಮೀನುಗಾರರನ್ನು ವಶಕ್ಕೆ ಪಡೆದು ದಾಖಲೆಗಳನ್ನು ಪರಿಶೀಲಿಸಿದರು. ಇವರಲ್ಲಿ ನಾಲ್ವರು ತಮಿಳುನಾಡು ಮೂಲದವರಾಗಿದ್ದು, ಇಬ್ಬರು ಕೇರಳದವರು ಎಂದು ದೃಢಪಟ್ಟಿದೆ.

ಜಿಲ್ಲಾಡಳಿತ ಜಾರಿಗೊಳಿಸಿದ್ದ ಮೀನುಗಾರಿಕೆ ನಿಷೇಧದ ಅವಧಿಯಲ್ಲೇ ಈ ದೋಣಿ ಮೀನುಗಾರಿಕೆಯಲ್ಲಿ ತೊಡಗಿತ್ತು ಎಂಬ ಆರೋಪ ಕೇಳಿಬಂದಿದ್ದು, ದೋಣಿ ಮಾಲೀಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಹಾಗೂ ದೋಣಿಯ ಪರವಾನಗಿ ಮತ್ತು ನೋಂದಣಿಯನ್ನು ರದ್ದುಗೊಳಿಸುವಂತೆ ಮೀನುಗಾರಿಕಾ ಇಲಾಖೆಗೆ ವರದಿ ಸಲ್ಲಿಸಲಾಗಿದೆ.

ಶುಕ್ರವಾರ ಸಂಜೆ ಸುಮಾರು 6:15ರ ವೇಳೆಗೆ ದೋಣಿ ಉಚ್ಚಿಲ ಕಡಲತೀರಕ್ಕೆ ಕೊಚ್ಚಿಕೊಂಡು ಬಂದಿದ್ದು, ಮಾಹಿತಿ ಪಡೆದ ಹೇಜಮಾಡಿ ಕರಾವಳಿ ಭದ್ರತಾ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಅಬ್ದುಲ್ ರಜಾಕ್, ಸಿಬ್ಬಂದಿಗಳಾದ ಪ್ರವೀಣ್, ಕೆ.ಎನ್.ಡಿ. ರಾಜೇಶ್ ಹಾಗೂ ತೀರ್ಥ ಅವರು ಸ್ಥಳೀಯ ಮೀನುಗಾರರು ಮತ್ತು ಸಾರ್ವಜನಿಕರ ಸಹಕಾರದೊಂದಿಗೆ ದೋಣಿಯನ್ನು ಸುರಕ್ಷಿತವಾಗಿ ದಡಕ್ಕೆ ಎಳೆದಿದ್ದಾರೆ.

Leave a Reply

Your email address will not be published. Required fields are marked *