Breaking
4 Jul 2026, Sat

ಗೋವಾದಲ್ಲಿ ಸಂದೀಪ್ ಸಾಲಿಯಾನ್ ನಿಗೂಢ ಸಾವು: ಹನಿ ಟ್ರ್ಯಾಪ್ ಪ್ರಕರಣದ ಆರೋಪಿ ಮಹಿಳೆ ಬಂಧನ

ಪಣಜಿ: ಉಡುಪಿ ಮೂಲದ ಜಲಕ್ರೀಡಾ ಉದ್ಯಮಿ ಸಂದೀಪ್ ಸಾಲಿಯಾನ್ ಅವರ ನಿಗೂಢ ಸಾವಿನ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಾಗಿ, ಹನಿ ಟ್ರ್ಯಾಪ್ ಹಾಗೂ ದರೋಡೆ ಪ್ರಕರಣಗಳಲ್ಲಿ ಈಗಾಗಲೇ ಆರೋಪಿಯಾಗಿದ್ದ ಮಹಿಳೆಯನ್ನು ಗೋವಾ ಪೊಲೀಸರು ಬಂಧಿಸಿದ್ದಾರೆ.


ಬಂಧಿತೆ ಅಕ್ಷತಾ ಎಂ.ಕೆ. ಅಲಿಯಾಸ್ ರೂಪಶ್ರೀ ಸಿ. (ಮಂಗಳೂರು ಮೂಲದವಳು)ಯನ್ನು ಗೋವಾ ಪೊಲೀಸರು ಕರ್ನಾಟಕ ಪೊಲೀಸರ ಸಹಕಾರದೊಂದಿಗೆ ಬೆಂಗಳೂರಿನಲ್ಲಿ ಶುಕ್ರವಾರ (ಜು.3) ರಾತ್ರಿ ವಶಕ್ಕೆ ಪಡೆದಿದ್ದಾರೆ. ಸಂದೀಪ್ ಸಾಲಿಯಾನ್ ಕೊಲೆ ಪ್ರಕರಣದಲ್ಲಿ ಆಕೆ ಪ್ರಮುಖ ಆರೋಪಿಯಾಗಿದ್ದಾಳೆ.


ಪೊಲೀಸರ ತನಿಖೆ ಪ್ರಕಾರ, ಅಕ್ಷತಾ ಶ್ರೀಮಂತ ಉದ್ಯಮಿಗಳನ್ನು ಕ್ಯಾಸಿನೋಗಳಿಗೆ ಆಮಿಷವೊಡ್ಡಿ ಪರಿಚಯ ಬೆಳೆಸಿ, ಬಳಿಕ ಹೋಟೆಲ್ಗಳಿಗೆ ಕರೆದುಕೊಂಡು ಹೋಗಿ ಪ್ರಜ್ಞಾಹೀನರನ್ನಾಗಿ ಮಾಡಿ ಹಣ, ಚಿನ್ನಾಭರಣ ದೋಚುವುದು ಹಾಗೂ ಹನಿ ಟ್ರ್ಯಾಪ್ ಮೂಲಕ ಬ್ಲ್ಯಾಕ್ಮೇಲ್ ಮಾಡುವುದು ಆಕೆಯ ಕಾರ್ಯವಿಧಾನವಾಗಿತ್ತು.


ಇದೇ ಮಾದರಿಯಲ್ಲಿ ಈ ಹಿಂದೆ ಗುಜರಾತ್ ಮೂಲದ ಉದ್ಯಮಿ ತೋಮೇಶ್ ಯಾದವ್ ಅವರನ್ನು ಹೋಟೆಲ್ನಲ್ಲಿ ಪ್ರಜ್ಞಾಹೀನರನ್ನಾಗಿ ಮಾಡಿ ಸುಮಾರು ₹2.40 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ ಪ್ರಕರಣದಲ್ಲೂ ಆಕೆ ಆರೋಪಿಯಾಗಿದ್ದಾಳೆ. ಈ ಸಂಬಂಧ ಪಣಜಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.


ಸಂದೀಪ್ ಸಾಲಿಯಾನ್ (42), ಉಡುಪಿ ಜಿಲ್ಲೆಯ ಮಲ್ಪೆ ನಿವಾಸಿಯಾಗಿದ್ದು, ಈ ಹಿಂದೆ ಕರ್ನಾಟಕದ ಮಾಜಿ ಸಚಿವರೊಬ್ಬರ ಆಪ್ತ ಸಹಾಯಕರಾಗಿ ಹಾಗೂ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಬಳಿಕ ಆ ಉದ್ಯೋಗ ತೊರೆದು ಮಲ್ಪೆಯಲ್ಲಿ ಜಲಕ್ರೀಡಾ ದೋಣಿ (ವಾಟರ್ ಸ್ಪೋರ್ಟ್ಸ್) ಉದ್ಯಮ ಆರಂಭಿಸಿ, ಅಲ್ಪಾವಧಿಯಲ್ಲೇ ಯಶಸ್ವಿ ಉದ್ಯಮಿಯಾಗಿ ಗುರುತಿಸಿಕೊಂಡಿದ್ದರು.


ಸಂದೀಪ್ ಅವರ ನಿಗೂಢ ಸಾವಿನ ಕುರಿತು ಗೋವಾ ಪೊಲೀಸರು ತನಿಖೆ ಮುಂದುವರಿಸಿದ್ದು, ಬಂಧಿತ ಮಹಿಳೆಯಿಂದ ಹೆಚ್ಚಿನ ಮಾಹಿತಿ ಲಭ್ಯವಾಗುವ ನಿರೀಕ್ಷೆಯಿದೆ.

Leave a Reply

Your email address will not be published. Required fields are marked *