ಮಂಗಳೂರು: ಬೈಕಂಪಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಿನ್ನದ ವ್ಯಾಪಾರಿಯ ಕಾರನ್ನು ಅಡ್ಡಗಟ್ಟಿ ಸುಮಾರು ₹23.10 ಲಕ್ಷ ಮೌಲ್ಯದ ಚಿನ್ನಾಭರಣ, ಕಾರು ಹಾಗೂ ಮೊಬೈಲ್‌ಗಳನ್ನು ದೋಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಜೂನ್ 29ರಂದು ನಸುಕಿನ 2:45ರ ಸುಮಾರಿಗೆ ಮಹಾರಾಷ್ಟ್ರದಿಂದ ಕೇರಳದ ಪಯ್ಯನ್ನೂರಿಗೆ ಕುಟುಂಬದೊಂದಿಗೆ ಸ್ವಿಫ್ಟ್ ಡಿಜೈರ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಚಿನ್ನದ ವ್ಯಾಪಾರಿ ವಿಕಾಸ್ ಸುಬ್ಬರಾವ್ ಧನವಡೆ (44) ಅವರ ಕಾರನ್ನು ಬೈಕಂಪಾಡಿ ಸಮೀಪ ಎರಡು ಇನ್ನೋವಾ ಹಾಗೂ ಒಂದು ಸ್ವಿಫ್ಟ್ ಕಾರಿನಲ್ಲಿ ಬಂದ 6-7 ಮಂದಿ ಮುಸುಕುಧಾರಿಗಳು ಅಡ್ಡಗಟ್ಟಿದ್ದರು. ತಲವಾರು ತೋರಿಸಿ ಬೆದರಿಕೆ ಹಾಕಿ ಹಲ್ಲೆ ನಡೆಸಿದ ಆರೋಪಿಗಳು, ಅವರ ಪತ್ನಿ ಮತ್ತು ಮಗನನ್ನು ಬಲವಂತವಾಗಿ ಕಾರಿನಲ್ಲಿ ಕರೆದೊಯ್ದು ಕೆಲ ಕಿಲೋಮೀಟರ್ ದೂರದಲ್ಲಿ ಬಿಟ್ಟು, ಕಾರಿನಲ್ಲಿದ್ದ ಸುಮಾರು 180 ಗ್ರಾಂ ಚಿನ್ನಾಭರಣ (ಅಂದಾಜು ₹20 ಲಕ್ಷ), ಎರಡು ಮೊಬೈಲ್‌ಗಳು ಹಾಗೂ ಕಾರು ಸೇರಿದಂತೆ ಒಟ್ಟು ₹23.10 ಲಕ್ಷ ಮೌಲ್ಯದ ಆಸ್ತಿಯನ್ನು ದೋಚಿ ಪರಾರಿಯಾಗಿದ್ದರು. ಈ ಕುರಿತು ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದಲ್ಲಿ ಬಂಧಿತರನ್ನು ಕೇರಳದ ಕಣ್ಣೂರು ಜಿಲ್ಲೆಯ ಪತಿರಿಯಾಡ್ ಮೂಲದ ನಿಮಿಲ್ ಆರ್.ಕೆ. (37), ಮಡಿಕೇರಿಯ ಇರ್ಷಾದ್ (40) ಹಾಗೂ ಮುಸ್ತಾಫ (49) ಎಂದು ಗುರುತಿಸಲಾಗಿದೆ.

ತನಿಖೆ ವೇಳೆ ಜೂನ್ 30ರಂದು ಬಂಟ್ವಾಳದ ಪಚ್ಚಿನಡ್ಕದಲ್ಲಿ ನಂಬರ್ ಪ್ಲೇಟ್ ಇಲ್ಲದ ಸ್ಥಿತಿಯಲ್ಲಿ ಮಾರುತಿ ಡಿಜೈರ್ ಕಾರು ಪತ್ತೆಯಾಗಿತ್ತು. ಬಳಿಕ ಜುಲೈ 2ರಂದು ಕೇರಳದ ಕಣ್ಣೂರು ಜಿಲ್ಲೆಯ ಚಾಲದಲ್ಲಿ ನಿಮಿಲ್‌ನನ್ನು ಬಂಧಿಸಲಾಗಿದ್ದು, ಆರೋಪಿಗಳಿಗೆ ಆಶ್ರಯ ನೀಡಿದ ಇರ್ಷಾದ್‌ನನ್ನು ಕೊಡಗು ಜಿಲ್ಲೆಯ ಪೊನ್ನಂಪೇಟೆಯಲ್ಲಿ ಹಾಗೂ ಕಾರು ಒದಗಿಸಿ ಸಹಕರಿಸಿದ್ದ ಮುಸ್ತಾಫನನ್ನು ಮಡಿಕೇರಿ ತಾಲೂಕಿನ ಮೂರ್ನಾಡು ಜಂಕ್ಷನ್‌ನಲ್ಲಿ ವಶಕ್ಕೆ ಪಡೆಯಲಾಗಿದೆ.

ಪ್ರಾಥಮಿಕ ತನಿಖೆಯಲ್ಲಿ ಒಟ್ಟು 16 ಮಂದಿ ಪ್ರಕರಣದಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದ್ದು, ಅವರಲ್ಲಿ 14 ಮಂದಿ ನೇರವಾಗಿ ದರೋಡೆಯಲ್ಲಿ ಭಾಗಿಯಾಗಿದ್ದರೆ, ಇಬ್ಬರು ಆರೋಪಿಗಳಿಗೆ ಆಶ್ರಯ ಮತ್ತು ನೆರವು ನೀಡಿರುವುದು ತಿಳಿದುಬಂದಿದೆ. ಬಂಧಿತ ಮೂವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ 10 ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.

ಪೊಲೀಸರು ದರೋಡೆಗೆ ಬಳಸಿದ್ದ ನಾಲ್ಕು ಕಾರುಗಳ ಪೈಕಿ ಒಂದು ಇನ್ನೋವಾ ಕ್ರಿಸ್ಟಾ ಹಾಗೂ ದರೋಡೆಗೀಡಾದ ಮಾರುತಿ ಡಿಜೈರ್ ಕಾರನ್ನು ವಶಪಡಿಸಿಕೊಂಡಿದ್ದಾರೆ. ಉಳಿದ ಮೂರು ಕಾರುಗಳು, 180 ಗ್ರಾಂ ಚಿನ್ನಾಭರಣ ಹಾಗೂ ಎರಡು ಮೊಬೈಲ್‌ಗಳ ಪತ್ತೆ ಕಾರ್ಯ ಮುಂದುವರಿದಿದೆ.
ಪ್ರಾಥಮಿಕ ತನಿಖೆಯ ಪ್ರಕಾರ, ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳೆಲ್ಲರೂ ಮಡಿಕೇರಿ ಜಿಲ್ಲೆ ಮತ್ತು ಕೇರಳ ಮೂಲದವರಾಗಿದ್ದು, ಉಳಿದ ಆರೋಪಿಗಳ ಬಂಧನಕ್ಕೆ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.


