ಮಂಗಳೂರು: ನಗರದ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಬದ್ರಿಯಾ ನಗರದಲ್ಲಿ ಮನೆಯೊಂದರಲ್ಲಿ ಕಳ್ಳತನಕ್ಕೆ ಯತ್ನಿಸಿದ ನಾಲ್ವರು ಆರೋಪಿಗಳ ಪೈಕಿ ಓರ್ವನನ್ನು ಸ್ಥಳೀಯ ನಿವಾಸಿಗಳೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಜುಲೈ 3ರ ಶುಕ್ರವಾರ ನಸುಕಿನ ಜಾವ ನಡೆದಿದೆ.

ಮೂಲಗಳ ಪ್ರಕಾರ, ಶುಕ್ರವಾರ ಬೆಳಗ್ಗೆ ಸುಮಾರು 2:30ರ ವೇಳೆಗೆ ಬದ್ರಿಯಾ ನಗರದ ಹಂಸ ಅವರ ಮನೆಗೆ ನಾಲ್ವರು ಅಪರಿಚಿತರು ನುಗ್ಗಿದ್ದರು. ಮನೆಯೊಳಗಿನ ಅನುಮಾನಾಸ್ಪದ ಚಲನವಲನವನ್ನು ಗಮನಿಸಿದ ಕುಟುಂಬದವರು ಎಚ್ಚೆತ್ತುಕೊಂಡು ಕಾರ್ಯಪ್ರವೃತ್ತರಾಗಿದ್ದು, ಕಳ್ಳತನಕ್ಕೆ ಯತ್ನಿಸುತ್ತಿದ್ದ ಆರೋಪಿಗಳ ಪೈಕಿ ಓರ್ವನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಉಳಿದ ಮೂವರು ಸ್ಥಳದಿಂದ ಪರಾರಿಯಾಗಿದ್ದಾರೆ.

ಹಿಡಿದ ಆರೋಪಿಯನ್ನು ಬಿಹಾರ ಮೂಲದ ದೀಪ್ ಕುಮಾರ್ ಎಂದು ಗುರುತಿಸಲಾಗಿದೆ. ಸ್ಥಳೀಯರು ಆರೋಪಿಯನ್ನು ಸುರತ್ಕಲ್ ಪೊಲೀಸರಿಗೆ ಒಪ್ಪಿಸಿದ್ದು, ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಈ ನಡುವೆ ಪರಾರಿಯಾದ ಉಳಿದ ಮೂವರು ಆರೋಪಿಗಳ ಪತ್ತೆಗೆ ಪೊಲೀಸರು ತೀವ್ರ ಶೋಧ ಕಾರ್ಯ ಕೈಗೊಂಡಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.






