Breaking
3 Jul 2026, Fri

ಲಾಯಿಲ: ಪಡ್ಲಾಡಿ ಕಿಂಡಿ ಅಣೆಕಟ್ಟಿನಲ್ಲಿ ಸಿಲುಕಿದ್ದ ಮರ-ಕಸ-ಕಡ್ಡಿ ತೆರವು; ಸ್ಪಂದಿಸಿದ ಲಾಯಿಲ ಗ್ರಾಮ ಪಂಚಾಯತ್ ಕಾರ್ಯಕ್ಕೆ ಮೆಚ್ಚುಗೆ

ಬೆಳ್ತಂಗಡಿ: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ನದಿ, ಹಳ್ಳ ಹಾಗೂ ತೋಡುಗಳಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ಲಾಯಿಲ ಗ್ರಾಮದ ಪಡ್ಲಾಡಿ ಸಮೀಪ ಹರಿಯುತ್ತಿರುವ ಸೋಮವತಿ ಉಪನದಿಯ ಕಿಂಡಿ ಅಣೆಕಟ್ಟಿನಲ್ಲಿ ಮರ, ಕಸ ಹಾಗೂ ಕಡ್ಡಿಗಳು ಸಿಲುಕಿ ನೀರಿನ ಹರಿವಿಗೆ ಅಡ್ಡಿಯಾಗಿತ್ತು.

ಇದರಿಂದ ನೀರು ಸರಾಗವಾಗಿ ಹರಿಯದೆ ಪಕ್ಕದ ಕೃಷಿ ಪ್ರದೇಶಗಳಿಗೆ ನೀರು ನುಗ್ಗುವ ಆತಂಕ ಎದುರಾಗಿತ್ತು. ಈ ಕುರಿತು ಸ್ಥಳೀಯರು ಮಾಜಿ ಗ್ರಾಮ ಪಂಚಾಯತ್ ಸದಸ್ಯ ಪ್ರಸಾದ್ ಶೆಟ್ಟಿ ಎಣಿಂಜೆ ಅವರ ಗಮನಕ್ಕೆ ತಂದಿದ್ದು, ಅವರು ತಕ್ಷಣ ಲಾಯಿಲ ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ಮಾಹಿತಿ ನೀಡಿ ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು.

ಮನವಿಗೆ ತ್ವರಿತವಾಗಿ ಸ್ಪಂದಿಸಿದ ಗ್ರಾಮ ಪಂಚಾಯತ್ ಅಧಿಕಾರಿಗಳು, ಪಂಚಾಯತ್ ಸಿಬ್ಬಂದಿಯ ಮೂಲಕ ಕಿಂಡಿ ಅಣೆಕಟ್ಟಿನಲ್ಲಿ ಸಿಲುಕಿದ್ದ ಮರ ಸೇರಿದಂತೆ ಕಸ ಕಡ್ಡಿಗಳನ್ನು ತೆರವುಗೊಳಿಸಿ, ನೀರು ಸುಗಮವಾಗಿ ಹರಿಯುವಂತೆ ವ್ಯವಸ್ಥೆ ಮಾಡಿದರು.

ಮನವಿಗೆ ಸ್ಪಂದಿಸಿ ಸಮಯೋಚಿತವಾಗಿ ಸಮಸ್ಯೆ ಪರಿಹರಿಸಿದ ಪ್ರಸಾದ್ ಶೆಟ್ಟಿ ಎಣಿಂಜೆ ಹಾಗೂ ಲಾಯಿಲ ಗ್ರಾಮ ಪಂಚಾಯತ್ ಅಧಿಕಾರಿಗಳ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *