ಉಡುಪಿ: ಜಿಲ್ಲೆಯ ಸುಭಾಸ್ ನಗರದ ಪೆಟ್ರೋಲ್ ಬಂಕ್‌ನಲ್ಲಿ ಕಾರಿಗೆ ಡೀಸೆಲ್ ತುಂಬಿಸಿಕೊಂಡು ಹಣ ಪಾವತಿಸದೆ ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಶಿರ್ವ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರ ಆರೋಪಿಗಳನ್ನು ಶಿರ್ವ ಕೋಟೆಕಾರ್ ನಿವಾಸಿ ಮಹಮ್ಮದ್ ರಿಯಾಜ್ (26), ಶಿರ್ವ ಭೂತಬೆಟ್ಟು ನಿವಾಸಿ ಮಹಮ್ಮದ್ ಅಫ್ರಾಜ್ (23) ಹಾಗೂ ಉಡುಪಿ ಅಂಬಾಗಿಲು ನಿವಾಸಿ ಆಶಿಲ್ (21) ಎಂದು ಗುರುತಿಸಲಾಗಿದೆ.

ಜೂನ್ 27ರಂದು ರಾತ್ರಿ ಸುಮಾರು 9.10ಕ್ಕೆ ಈಕೋ ಸ್ಪೋರ್ಟ್ಸ್ ಕಾರಿನಲ್ಲಿ ಸುಭಾಸ್ ನಗರದ ಪೆಟ್ರೋಲ್ ಬಂಕ್‌ಗೆ ಬಂದಿದ್ದ ಆರೋಪಿಗಳು ₹4,711 ಮೌಲ್ಯದ ಡೀಸೆಲ್ ತುಂಬಿಸಿಕೊಂಡಿದ್ದರು. ಬಳಿಕ ಬಂಕ್ ಸಿಬ್ಬಂದಿ ಶಶಾಂಕ್ ಅವರ ಬಳಿ ಬಿಲ್ ನೀಡುವಂತೆ ಕೇಳಿದ್ದು, ಅವರು ಬಿಲ್ ಸಿದ್ಧಪಡಿಸುವಷ್ಟರಲ್ಲಿ ಹಣ ಪಾವತಿಸದೆ ಕಾರಿನಲ್ಲಿ ಪರಾರಿಯಾಗಿದ್ದರು.

ಪ್ರಕರಣ ದಾಖಲಿಸಿಕೊಂಡ ಶಿರ್ವ ಪೊಲೀಸರು ತನಿಖೆ ನಡೆಸಿ ಮೂವರನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಇದೇ ರೀತಿಯ ಕೃತ್ಯಗಳನ್ನು ಇತರೆ ಪ್ರದೇಶಗಳಲ್ಲಿಯೂ ಎಸಗಿದ್ದಾರೆಯೇ ಎಂಬ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.






