Breaking
3 Jul 2026, Fri

ಮಂಗಳೂರು: ಜೈಲಿಗೆ ಗಾಂಜಾ ಎಸೆದಾತ ಸೆರೆ; ಬೆನ್ನಟ್ಟಿ ಹಿಡಿದ ಕೆಎಸ್‌ಐಎಸ್‌ಎಫ್‌ ಸಿಬ್ಬಂದಿ

ಮಂಗಳೂರು: ನಗರದ ಜಿಲ್ಲಾ ಕಾರಾಗೃಹದೊಳಗೆ ಗಾಂಜಾ ಎಸೆದ ಆರೋಪಿಯನ್ನು ಕೆಎಸ್‌ಐಎಸ್‌ಎಫ್‌ ಸಿಬ್ಬಂದಿ ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ. ಬಂಟ್ವಾಳ ಕೊಳತ್ತಮಜಲು ಕೋಳಕೇರಿ ಮೂಲದ ಪ್ರಸ್ತುತ ಉರ್ವ ನಿವಾಸಿಯಾಗಿರುವ ತಿಲಕ್‌ರಾಜ್‌ ಜುಲೈ 2ರಂದು ಮುಂಜಾನೆ ಸುಮಾರು 4.20ಕ್ಕೆ ಕಾರಾಗೃಹದ ಅಡುಗೆ ಮನೆ ಪ್ರದೇಶಕ್ಕೆ ಗಾಂಜಾ ಪ್ಯಾಕೆಟ್‌ ಎಸೆದಿದ್ದಾನೆ ಎನ್ನಲಾಗಿದೆ.

ಕೆಎಸ್‌ಐಎಸ್‌ಎಫ್‌ನ ಆರ್‌ಪಿಸಿ ಕಿರಣ್‌ ಅಬಳಿಕ ಉಸ್ತುವಾರಿ ಅಧಿಕಾರಿ ಪೊಲೀಸ್‌ ನಿರೀಕ್ಷಕ ಸುಭಾಷ್‌ ಅವರಿಗೆ ಮಾಹಿತಿ ನೀಡಿದ್ದು, ಅನುಮಾನಾಸ್ಪದ ಚಲನವಲನ ಗಮನಿಸಿ ಎಎಸ್‌ಐ ಕಿರಣ್‌ ಅಂಬಿಗ ಅವರಿಗೆ ಮಾಹಿತಿ ನೀಡಿದ್ದು, ಸುಮಾರು 500 ಮೀಟರ್‌ ಬೆನ್ನಟ್ಟಿ ಆರೋಪಿಯನ್ನು ಹಿಡಿದಿದ್ದಾರೆ. ಬಳಿಕ ಉಸ್ತುವಾರಿ ಅಧಿಕಾರಿ ಪೊಲೀಸ್‌ ನಿರೀಕ್ಷಕ ಸುಭಾಷ್‌ ಅವರಿಗೆ ಮಾಹಿತಿ ನೀಡಿದ್ದು, ಅವರು ಬಂದು ವಿಚಾರಣೆ ನಡೆಸಿದಾಗ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.

ವಿಚಾರಣೆ ವೇಳೆ ಮೂಡುಶೆಡ್ಡೆಯ ಕಿರಣ್‌ ಎಂಬ ಆರೋಪಿಗೆ ಗಾಂಜಾ, ಲೈಟರ್‌ ಹಾಗೂ ಗಾಂಜಾ ಸೇದುವ ಪೇಪರ್‌ಗಳನ್ನು ನೀಡಿ ಜೈಲಿನೊಳಗೆ ಎಸೆಯಲು ₹2,000 ನೀಡಿದ್ದಾನೆ ಎಂದು ತಿಲಕ್‌ರಾಜ್‌ ಒಪ್ಪಿಕೊಂಡಿದ್ದಾನೆ. ಜೈಲಿನಲ್ಲಿರುವ ಬಂಧಿ ಲಾಯ್‌ ವೇಗಸ್‌ ಎಂಬಾತನ ಮೊಬೈಲ್‌ ನಂಬರ್‌ ನೀಡಿದ್ದು, ಆತನ ಸೂಚನೆಯಂತೆ ಅಡುಗೆ ಮನೆ ಪ್ರದೇಶಕ್ಕೆ ಈ ವಸ್ತುಗಳನ್ನು ಎಸೆದಿರುವುದಾಗಿಯೂ ತಿಳಿಸಿದ್ದಾನೆ.

ಈ ಸಂಬಂಧ ತಿಲಕ್‌ರಾಜ್‌ ಹಾಗೂ ಲಾಯ್‌ ವೇಗಸ್‌ ವಿರುದ್ಧ ಬರ್ಕೆ ಪೊಲೀಸ್‌ ಠಾಣೆಯಲ್ಲಿ ಎನ್‌ಡಿಪಿಎಸ್‌ ಕಾಯ್ದೆ ಹಾಗೂ ಕರ್ನಾಟಕ ಕಾರಾಗೃಹಗಳ ತಿದ್ದುಪಡಿ–2022ರ ಸೆಕ್ಷನ್‌ 42ರಡಿ ಪ್ರಕರಣ ದಾಖಲಾಗಿದೆ. ಕಾರ್ಯಾಚರಣೆಗೆ ಕಾರಾಗೃಹ ಅಧೀಕ್ಷಕ ಶರಣ ಬಸಪ್ಪ, ಕೆಎಸ್‌ಐಎಸ್‌ಎಫ್‌ ಪೊಲೀಸ್‌ ಇನ್‌ಸ್ಪೆಕ್ಟರ್‌ ಸುಭಾಷ್‌ ಎಚ್‌.ಎನ್‌. ಹಾಗೂ ಕಾರಾಗೃಹ ಸಿಬಂದಿ ಸಹಕರಿಸಿದ್ದಾರೆ.

Leave a Reply

Your email address will not be published. Required fields are marked *