Breaking
2 Jul 2026, Thu

ಮಂಗಳೂರು: ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ನದಿಯಲ್ಲಿ ಪತ್ತೆ

ಮಂಗಳೂರು: ಜೂನ್‌ 30ರ ಮಂಗಳವಾರ ಬೆಳಗ್ಗೆಯಿಂದ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬರ ಮೃತದೇಹ ಜುಲೈ 1ರ ಬುಧವಾರ ಸಂಜೆ ಗುರುಪುರದ ಫಲ್ಗುಣಿ ನದಿಯಲ್ಲಿ ಪತ್ತೆಯಾಗಿದೆ. ಮೃತರನ್ನು ಕೊಣಾಜೆಯ ಉರುಮನೆ ನಿವಾಸಿ 40 ವರ್ಷದ ಮೊಹಮ್ಮದ್ ಆಶ್ರಫ್ ಎಂದು ಗುರುತಿಸಲಾಗಿದೆ.‌

ಅಶ್ರಫ್ ಅವರು ಇತ್ತೀಚೆಗಷ್ಟೇ ಹೊಸ ಮನೆ ನಿರ್ಮಿಸಿದ್ದರು. ಕೆಲಸ ಕಳೆದುಕೊಂಡಿದ್ದ ಅವರಿಗೆ ಕಳೆದ ಕೆಲವು ದಿನಗಳಿಂದ ಮನೆಯಲ್ಲೇ ಇದ್ದರು ಎನ್ನಲಾಗಿದೆ. ಮಂಗಳವಾರ ಬೆಳಗ್ಗೆ ಮಸೀದಿಗೆ ತೆರಳುವುದಾಗಿ ಹೇಳಿ ಮನೆಯಿಂದ ಹೊರಟಿದ್ದ ಆಶ್ರಫ್ ಅವರು ಮನೆಗೆ ವಾಪಸ್ ಬಾರದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಕೊಣಾಜೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.

ಬುಧವಾರ ಬೆಳಗ್ಗೆ ಗುರುಪುರ ಸೇತುವೆ ಬಳಿ ಅವರ ದ್ವಿಚಕ್ರ ವಾಹನ ಪತ್ತೆಯಾಗಿತ್ತು. ದ್ವಿಚಕ್ರ ವಾಹನವೊಂದು ನಿಂತಿದ್ದನ್ನು ಕಂಡ ಸಾರ್ವಜನಿಕರು ಅದರ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಈ ಪೋಸ್ಟ್ ಕಂಡ ಕುಟುಂಬಸ್ಥರು ಬಳಿಕ ಸ್ಥಳಕ್ಕೆ ಧಾವಿಸಿದರು.

ಬಳಿಕ ನದಿಯಲ್ಲಿ ಶೋಧ ಕಾರ್ಯ ಕೈಗೊಳ್ಳಲಾಗಿದ್ದು, ಸಂಜೆ ವೇಳೆ ಆಶ್ರಫ್ ಅವರ ಮೃತದೇಹ ಪತ್ತೆಯಾಗಿದೆ. ಘಟನೆ ಸಂಬಂಧ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *