ಉಡುಪಿ: ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ಪ್ರಮೋದ್ ಮಧ್ವರಾಜ್ ಅವರ ಮಾಜಿ ಆಪ್ತ ಸಹಾಯಕ ಸಂದೀಪ್ ಸಾಲಿಯನ್ (40) ಮಂಗಳವಾರ ಗೋವಾದ ಕಲ್ಲಂಗೂಟ್ ಬೀಚ್ ಸಮೀಪದ ಅತಿಥಿ ಗೃಹದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿರುವ ಘಟನೆ ವರದಿಯಾಗಿದೆ.

ಸಂದೀಪ್ ಅವರು ಉಡುಪಿ ಜಿಲ್ಲೆಯ ಮಲ್ಪೆ ಮೂಲದವರಾಗಿದ್ದು, ಹಲವು ವರ್ಷಗಳ ಹಿಂದೆ ಪ್ರಮೋದ್ ಮಧ್ವರಾಜ್ ಅವರ ಆಪ್ತ ಸಹಾಯಕ ಹುದ್ದೆಯನ್ನು ತೊರೆದಿದ್ದರು. ಬಳಿಕ ಅವರು ಪ್ರವಾಸೋದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡು, ಮಲ್ಪೆಯಲ್ಲಿ ಪ್ರವಾಸಿ ದೋಣಿ ವ್ಯವಹಾರ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ.
ಮೂರು ದಿನಗಳ ಹಿಂದೆ ಪ್ರವಾಸದ ಉದ್ದೇಶದಿಂದ ಅವರು ಗೋವಾಕ್ಕೆ ತೆರಳಿದ್ದರು ಎನ್ನಲಾಗಿದೆ. ಈ ನಡುವೆ ಅವರು ತಂಗಿದ್ದ ಅತಿಥಿ ಗೃಹದಲ್ಲಿ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಸಂದೀಪ್ ಅವರ ಹಠಾತ್ ಸಾವಿಗೆ ಹೃದಯಾಘಾತ ಕಾರಣವೇ ಅಥವಾ ಬೇರೆ ಯಾವುದೇ ಅನುಮಾನಾಸ್ಪದ ಅಂಶಗಳಿವೆಯೇ ಎಂಬ ಬಗ್ಗೆ ಪ್ರಶ್ನೆಗಳು ಮೂಡಿವೆ. ಆದರೆ, ಸಾವಿನ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಸಂಬಂಧಿತ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ವರದಿ ಬಳಿಕ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.




