Breaking
30 Jun 2026, Tue

ತುಂಬೆ ಡ್ಯಾಂನಲ್ಲಿ ಏಕಾಏಕಿ ನೀರಿನ ಮಟ್ಟ ಏರಿಕೆ: ನದಿ ತೀರದ ಪಂಪ್‌ಸೆಟ್‌ಗಳು ಜಲಾವೃತ, ರೈತರಿಗೆ ಅಪಾರ ನಷ್ಟ

ಬಂಟ್ವಾಳ: ಜಿಲ್ಲೆಯ ಜೀವನಾಡಿಯಾದ ನೇತ್ರಾವತಿ ನದಿಗೆ ನಿರ್ಮಿಸಿರುವ ತುಂಬೆ ಡ್ಯಾಂನಲ್ಲಿ ಯಾವುದೇ ಪೂರ್ವ ಸೂಚನೆ ನೀಡದೆ ಸೋಮವಾರ (ಜೂನ್29) ರಾತ್ರಿ ಏಕಾಏಕಿ 7.5 ಮೀಟರ್ ನೀರು ಸಂಗ್ರಹಿಸಿರುವ ಪರಿಣಾಮ, ಡ್ಯಾಂನ ಮೇಲ್ಭಾಗದ ಸಜೀಪಮುನ್ನೂರು, ನಂದಾವರ, ಪಾಣೆಮಂಗಳೂರು ಸೇರಿದಂತೆ ನದಿ ತೀರದ ಪ್ರದೇಶಗಳ ರೈತರ ವಿದ್ಯುತ್ ಪಂಪ್‌ಸೆಟ್‌ಗಳು ಜಲಾವೃತಗೊಂಡು ಅಪಾರ ನಷ್ಟ ಉಂಟಾಗಿದೆ ಎಂದು ಆರೋಪಿಸಲಾಗಿದೆ.

ಮಂಗಳೂರಿಗೆ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ನಿರ್ಮಿಸಿರುವ ಡ್ಯಾಂನಲ್ಲಿ ನೀರಿನ ಮಟ್ಟವನ್ನು ಏಕಾಏಕಿ ಹೆಚ್ಚಿಸಿರುವುದರಿಂದ ನದಿ ತೀರದ ಕೃಷಿಯನ್ನೇ ಅವಲಂಬಿಸಿರುವ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಬಂಟ್ವಾಳ ತಾಲೂಕು ರೈತ ಸಂಘದ ಅಧ್ಯಕ್ಷ ಎಂ. ಸುಬ್ರಹ್ಮಣ್ಯ ಭಟ್ ತಿಳಿಸಿದ್ದಾರೆ.

ಮಂಗಳೂರು ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತವು ರೈತರ ಹಿತದೃಷ್ಟಿಯಿಂದ ನಡೆದುಕೊಳ್ಳುವ ಬದಲು ಪದೇಪದೇ ಹೊಣೆಗೇಡಿತನ, ಬೇಜವಾಬ್ದಾರಿತನ ಮತ್ತು ನಿರ್ಲಕ್ಷ್ಯ ತೋರಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಡ್ಯಾಂನ ನೀರಿನ ಮಟ್ಟವನ್ನು ನಿಯಂತ್ರಿತವಾಗಿ ಕಾಯ್ದುಕೊಳ್ಳಬೇಕು. ನೀರು ಸಂಗ್ರಹಿಸುವ ಮೊದಲು ರೈತರಿಗೆ ಸೂಕ್ತ ಪೂರ್ವ ಸೂಚನೆ ನೀಡುವ ವ್ಯವಸ್ಥೆ ಜಾರಿಗೊಳಿಸಿ, ನದಿ ತೀರದ ಕೃಷಿಯನ್ನು ಅವಲಂಬಿಸಿರುವ ಅನ್ನದಾತರ ಬದುಕಿನಲ್ಲಿ ಚೆಲ್ಲಾಟವಾಡದೆ ಅವರ ಹಿತವನ್ನು ಕಾಪಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಈ ಕುರಿತು ಜಿಲ್ಲಾಡಳಿತ, ಮಂಗಳೂರು ಮಹಾನಗರ ಪಾಲಿಕೆ ಎಚ್ಚರಿಕೆಯ ಕ್ರಮವನ್ನು ಕೈಗೊಳ್ಳುವಂತೆ ಜಿಲ್ಲೆಯ ಶಾಸಕರು ಮತ್ತು ಸಂಸದರು ಸಂಬಂಧಪಟ್ಟವರಿಗೆ ಗಮನ ಸೆಳೆಯುವಂತೆ, ಇಂತಹ ಘಟನೆಗಳು ಮರುಕಳಿಸದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಬಂಟ್ವಾಳ ತಾಲೂಕು ರೈತ ಸಂಘದ ಅಧ್ಯಕ್ಷ ಎಂ. ಸುಬ್ರಹ್ಮಣ್ಯ ಭಟ್ ರೈತರ ಪರವಾಗಿ ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *