Breaking
30 Jun 2026, Tue

ಮಂಗಳೂರು: ಸಮುದ್ರದಲ್ಲಿ ಮೀನುಗಾರಿಕಾ ಬೋಟ್ ಮುಳುಗಡೆ; ಭಾರತೀಯ ಕೋಸ್ಟ್ ಗಾರ್ಡ್‌ನಿಂದ ಆರು ಮೀನುಗಾರರ ರಕ್ಷಣೆ

ಮಂಗಳೂರಿನ ಸಮೀಪ ಅರಬ್ಬಿ ಸಮುದ್ರದಲ್ಲಿ ಪ್ರಕ್ಷುಬ್ಧ ಹವಾಮಾನದಿಂದ ಮೀನುಗಾರಿಕಾ ಬೋಟ್ ಮುಳುಗಡೆಯಾಗಿದ್ದು, ಅದರಲ್ಲಿದ್ದ ಆರು ಮಂದಿ ಮೀನುಗಾರರನ್ನು ಭಾರತೀಯ ಕೋಸ್ಟ್ ಗಾರ್ಡ್ ಸಿಬ್ಬಂದಿ ಯಶಸ್ವಿಯಾಗಿ ರಕ್ಷಿಸಿದ್ದಾರೆ.

‘ಐಎಫ್‌ಬಿ ಮಂಜುಮಾತಾ’ ಹೆಸರಿನ ಮೀನುಗಾರಿಕಾ ಬೋಟ್‌ನಲ್ಲಿ ಆರು ಮಂದಿ ಮೀನುಗಾರರು ಆಳ ಸಮುದ್ರದಲ್ಲಿ ಮೀನುಗಾರಿಕೆಯಲ್ಲಿ ತೊಡಗಿದ್ದ ವೇಳೆ, ಏಕಾಏಕಿ ಸಮುದ್ರದಲ್ಲಿ ಭಾರಿ ಅಲೆಗಳು ಎದ್ದ ಪರಿಣಾಮ ಬೋಟ್‌ಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ನುಗ್ಗಿತು. ನೀರಿನ ಒತ್ತಡ ಹೆಚ್ಚಾದಂತೆ ಬೋಟ್ ಮುಳುಗಲಾರಂಭಿಸಿತು.

ಮೀನುಗಾರರು ಸಂಕಷ್ಟದಲ್ಲಿರುವ ಮಾಹಿತಿ ಲಭಿಸುತ್ತಿದ್ದಂತೆ ಭಾರತೀಯ ಕೋಸ್ಟ್ ಗಾರ್ಡ್ ಸಿಬ್ಬಂದಿ ತಕ್ಷಣವೇ ಕಾರ್ಯಾಚರಣೆ ಆರಂಭಿಸಿ, ಅತ್ಯಾಧುನಿಕ ಕಡಲ ಕಾವಲು ಹಡಗು ‘ಐಸಿಜಿಎಸ್ ಸಚೇತ್’ ಮೂಲಕ ಸ್ಥಳಕ್ಕೆ ಧಾವಿಸಿದರು.

ಸಮುದ್ರದಲ್ಲಿ ಭಾರಿ ಅಲೆಗಳ ಅಬ್ಬರದಿಂದ ಬೋಟ್ ಸಮೀಪಕ್ಕೆ ತೆರಳಲು ಸಾಧ್ಯವಾಗದ ಹಿನ್ನೆಲೆಯಲ್ಲಿ, ಕೋಸ್ಟ್ ಗಾರ್ಡ್ ಸಿಬ್ಬಂದಿ ರಿಮೋಟ್-ಆಪರೇಟೆಡ್ ಲೈಫ್‌ಬಾಯ್‌ಗಳ ನೆರವಿನಿಂದ ಮೀನುಗಾರರ ಬಳಿಗೆ ತಲುಪಿ, ಆರು ಮಂದಿ ಮೀನುಗಾರರನ್ನು ಸುರಕ್ಷಿತವಾಗಿ ರಕ್ಷಿಸಿದರು.

ರಕ್ಷಿಸಲ್ಪಟ್ಟ ಮೀನುಗಾರರಿಗೆ ಪ್ರಾಥಮಿಕ ಚಿಕಿತ್ಸೆ, ಆಹಾರ ಹಾಗೂ ಅಗತ್ಯ ನೆರವು ಒದಗಿಸಿದ ಬಳಿಕ ಅವರನ್ನು ಮಂಗಳೂರಿನ ನ್ಯೂ ಮಂಗಳೂರು ಬಂದರಿಗೆ ಕರೆತರಲಾಯಿತು. ಸದ್ಯ ಎಲ್ಲಾ ಮೀನುಗಾರರು ಸುರಕ್ಷಿತರಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *