Breaking
30 Jun 2026, Tue

ಬೆಳ್ತಂಗಡಿ: ಪೌರ ಕಾರ್ಮಿಕರ ಸಮಸ್ಯೆಗಳ ಕುರಿತು ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರಿಗೆ ಮನವಿ

ಮಂಗಳೂರು: ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ರಘು ಸಿ ಅವರನ್ನು ಮಂಗಳೂರಿನ ಸರ್ಕ್ಯೂಟ್ ಹೌಸ್‌ನಲ್ಲಿ ಬೆಳ್ತಂಗಡಿ ತಾಲೂಕು ಪಟ್ಟಣ ಮತ್ತು ಗ್ರಾಮ ಪಂಚಾಯತ್ ಪೌರ ಕಾರ್ಮಿಕರ ಸಂಘದ ಪದಾಧಿಕಾರಿಗಳು ಭೇಟಿ ಮಾಡಿ ಪೌರ ಕಾರ್ಮಿಕರ ವಿವಿಧ ಸಮಸ್ಯೆಗಳ ಕುರಿತು ಚರ್ಚೆ ನಡೆಸಿದರು.

ಈ ವೇಳೆ ನೇರಪಾವತಿ ಪೌರ ಕಾರ್ಮಿಕರನ್ನು ಖಾಯಂಗೊಳಿಸಬೇಕು, ಲೋಡರ್ಸ್ ಹಾಗೂ ಕ್ಲೀನರ್ಸ್‌ಗಳಿಗೆ ನೇರ ಪಾವತಿ ವ್ಯವಸ್ಥೆ ಜಾರಿಗೊಳಿಸಬೇಕು, ಪೌರ ಕಾರ್ಮಿಕರಿಗೆ ನಿವೇಶನ ಮತ್ತು ವಸತಿ ಸೌಲಭ್ಯ ಕಲ್ಪಿಸಬೇಕು, ಗ್ರಾಮ ಪಂಚಾಯತ್ ಸ್ವಚ್ಛತಾ ಕಾರ್ಯಗಳನ್ನು ಸಂಜೀವಿನಿ ಒಕ್ಕೂಟದ ಮೂಲಕ ನಿರ್ವಹಿಸುವ ಪದ್ಧತಿಯನ್ನು ಕೈಬಿಡಬೇಕು, ಗ್ರಾಮ ಪಂಚಾಯತ್ ಸ್ವಚ್ಛತಾ ಕಾರ್ಮಿಕರಿಗೆ ಏಕರೂಪದ ವೇತನ ನೀಡಬೇಕು, ಕೆಲಸದಿಂದ ಕೈಬಿಡಲಾದ ಸ್ವಚ್ಛತಾ ಕಾರ್ಮಿಕರನ್ನು ಮರುನೇಮಕ ಮಾಡಬೇಕು, ಪೌರ ಹಾಗೂ ಗ್ರಾಮ ಪಂಚಾಯತ್ ಸ್ವಚ್ಛತಾ ಕಾರ್ಮಿಕರ ಮೇಲಿನ ಅಧಿಕಾರಿಗಳ ದೌರ್ಜನ್ಯವನ್ನು ತಡೆಯಬೇಕು ಹಾಗೂ ಪೌರ ಕಾರ್ಮಿಕರ ವಿಶ್ರಾಂತಿ ಕೊಠಡಿಗಳನ್ನು ದುರಸ್ತಿಗೊಳಿಸಬೇಕು ಎಂದು ಆಯೋಗದ ಅಧ್ಯಕ್ಷರ ಗಮನಕ್ಕೆ ತರಲಾಯಿತು.

ಈ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕು ಪಟ್ಟಣ ಮತ್ತು ಗ್ರಾಮ ಪಂಚಾಯತ್ ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಸುರೇಶ್ ಸುದೆಮುಗೇರು, ಜೊತೆ ಕಾರ್ಯದರ್ಶಿ ಸುರೇಶ್ ಕೆ. ಅರಳಿ, ಮುಖಂಡರಾದ ಶಿವಕುಮಾರ್ ಪೂಂಜಾಲಕಟ್ಟೆ, ಉಮೇಶ್ ಪೂಂಜಾಲಕಟ್ಟೆ, ಸಂದೀಪ್ ಅರಳಿ, ವಸಂತ ಕೊಯ್ಯೂರು ಉಪಸ್ಥಿತರಿದ್ದರು. ಜೊತೆಗೆ ಪೌರ ಕಾರ್ಮಿಕ ಸಂಘದ ಜಿಲ್ಲಾಧ್ಯಕ್ಷ ಅನಿಲ್ ಕಂಕನಾಡಿ, ಕಾರ್ಯದರ್ಶಿ ಎಸ್.ಪಿ. ಆನಂದ್ ಹಾಗೂ ಇತರ ಪದಾಧಿಕಾರಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *