Breaking
1 Jul 2026, Wed

ಗೆಸ್ಟ್ ಹೌಸ್ ಆವರಣಗೋಡೆ ಕುಸಿದು ಮನೆ ಜಖಂ; ಕುಟುಂಬ ಸ್ಥಳಾಂತರಗೊಂಡಿದ್ದರಿಂದ ತಪ್ಪಿದ ಭಾರೀ ಅನಾಹುತ

ಉಳ್ಳಾಲ: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯ ನಡುವೆ ತಾಲೂಕಿನ ಕೆರೆಬೈಲ್ ಗುಡ್ಡೆ ಪ್ರದೇಶದಲ್ಲಿ ಬುಧವಾರ (ಜು.1) ಭೀಕರ ಅವಘಡ ಸಂಭವಿಸಿದೆ. ಗುಡ್ಡದ ತುದಿಯಲ್ಲಿದ್ದ ಖಾಸಗಿ ಗೆಸ್ಟ್ ಹೌಸ್ನ ಆವರಣಗೋಡೆ ಕುಸಿದು ಕೆಳಭಾಗದಲ್ಲಿದ್ದ ಮನೆಯ ಮೇಲೆ ಬಿದ್ದ ಪರಿಣಾಮ ಮನೆ ಸಂಪೂರ್ಣ ಹಾನಿಗೀಡಾಗಿದೆ.


ಕೆರೆಬೈಲ್ ನಿವಾಸಿ ಕಿಶೋರ್ ಅವರ ಮನೆಗೆ ಹಾನಿಯಾಗಿದ್ದು, ಅದೃಷ್ಟವಶಾತ್ ಕುಟುಂಬದವರು ವಾರದ ಹಿಂದೆಯೇ ಸಂಬಂಧಿಕರ ಮನೆಗೆ ಸ್ಥಳಾಂತರಗೊಂಡಿದ್ದರಿಂದ ದೊಡ್ಡ ಪ್ರಾಣಾಪಾಯ ತಪ್ಪಿದೆ.


ಮನೆಯ ಮೇಲ್ಭಾಗದಲ್ಲಿದ್ದ ಆವರಣಗೋಡೆಯಲ್ಲಿ ಬಿರುಕು ಕಾಣಿಸಿಕೊಂಡ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ಕುಟುಂಬ ಸ್ಥಳಾಂತರಗೊಂಡಿತ್ತು. ಈ ಹಿಂದೆಯೂ ಮಳೆಗಾಲದ ವೇಳೆ ಇದೇ ರೀತಿಯ ಸಮಸ್ಯೆ ಎದುರಾಗಿದ್ದರಿಂದ ಕೆಲಕಾಲ ಬಾಡಿಗೆ ಮನೆಗೆ ತೆರಳಿದ್ದ ಕುಟುಂಬ ಬಳಿಕ ಮತ್ತೆ ವಾಪಸ್ ನೆಲೆಸಿತ್ತು.


ಸ್ಥಳೀಯರ ಮಾಹಿತಿ ಪ್ರಕಾರ, ಗುಡ್ಡದ ಮೇಲ್ಭಾಗದಲ್ಲಿರುವ ಮಂಗಳೂರಿನ ಸಂಸ್ಥೆಯೊಂದಕ್ಕೆ ಸೇರಿದ ಗೆಸ್ಟ್ ಹೌಸ್ ಸುತ್ತ ನಿರ್ಮಿಸಲಾದ ಎತ್ತರದ ಆವರಣಗೋಡೆ ಕಳೆದ ನಾಲ್ಕೈದು ವರ್ಷಗಳಿಂದ ಸಮಸ್ಯೆಗೆ ಕಾರಣವಾಗುತ್ತಿದೆ. ಕೆರೆಬೈಲ್ ಗುಡ್ಡೆ ಪ್ರದೇಶದಲ್ಲಿ ಸುಮಾರು 40ಕ್ಕೂ ಹೆಚ್ಚು ಮನೆಗಳಿದ್ದು, ನಿವಾಸಿಗಳು ಕಳೆದ ಹಲವು ದಶಕಗಳಿಂದ ಇಲ್ಲಿ ವಾಸಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.


ಘಟನೆ ಬಳಿಕ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಇನ್ನಷ್ಟು ಹಾನಿ ಸಂಭವಿಸುವ ಮೊದಲು ಆವರಣಗೋಡೆಯನ್ನು ವೈಜ್ಞಾನಿಕವಾಗಿ ಮರುನಿರ್ಮಿಸಿ ಶಾಶ್ವತ ಪರಿಹಾರ ಕಲ್ಪಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *