ಮಂಗಳೂರಿನಲ್ಲಿ ಸುರಿಯುತ್ತಿರುವ ಭಾರೀ ಮಳೆಯ ನಡುವೆ ಕಂಕನಾಡಿ ಪೊಲೀಸ್ ಠಾಣೆ ವ್ಯಾಪ್ತಿಯ ನಾಗುರಿ ಪ್ರದೇಶದಲ್ಲಿ ಮನೆ ಮೇಲೆ ತಡೆಗೋಡೆ ಕುಸಿದು ಬಿದ್ದ ಪರಿಣಾಮ ಹೆಂಚಿನ ಛಾವಣಿಯ ಮನೆ ಧ್ವಂಸಗೊಂಡು ಮಹಿಳೆಯೊಬ್ಬರು ಹಾಗೂ ಇಬ್ಬರು ಬಾಲಕಿಯರು ಮೃತಪಟ್ಟ ದಾರುಣ ಘಟನೆ ನಡೆದಿದೆ.

ಮೃತರನ್ನು ಶಾಂತಾ (46), ಅನಾಮಿಕಾ ಚೌರಾಸಿಯಾ (8) ಹಾಗೂ ಪರಿ (4) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಅಲ್ಕಾ (14), ಅನುಷಾ (11) ಹಾಗೂ ಬಾಲಕೃಷ್ಣ (48) ಅವರನ್ನು ರಕ್ಷಿಸಲಾಗಿದೆ.
ಗರೋಡಿಯ ಮಾರಿಯಲ್ ಹೌಸ್ನಲ್ಲಿ ಇಂದು ಬೆಳಿಗ್ಗೆ ಸುಮಾರು 4.45ರಿಂದ 5 ಗಂಟೆಯ ನಡುವೆ ಘಟನೆ ಸಂಭವಿಸಿದೆ. ನಿರಂತರ ಮಳೆಯಿಂದ ಕಾಂಪೌಂಡ್ ಗೋಡೆ ಕುಸಿದು ಬಾಡಿಗೆ ಮನೆಗಳ ಮೇಲೆ ಬಿದ್ದಿದೆ. ಆ ಪ್ರದೇಶದಲ್ಲಿ ನಾಲ್ಕು ಕುಟುಂಬಗಳು ವಾಸಿಸುತ್ತಿದ್ದವು.

ಬಿಹಾರ ಮೂಲದ ಲಾಲ್ಬಾಬು ಅವರು ಕಳೆದ ಎಂಟು ವರ್ಷಗಳಿಂದ ಪತ್ನಿ ಹಾಗೂ ನಾಲ್ವರು ಪುತ್ರಿಯರೊಂದಿಗೆ ಇಲ್ಲಿ ವಾಸಿಸುತ್ತಿದ್ದರು. ಅವಶೇಷಗಳಡಿ ಸಿಲುಕಿದ್ದ ಅಲ್ಕಾ ಮತ್ತು ಅನುಷಾ ಅವರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದ್ದು, ಅನಾಮಿಕಾ ಮತ್ತು ಪರಿ ಅವರನ್ನು ಹೊರತೆಗೆದಾಗ ಮೃತಪಟ್ಟಿರುವುದು ದೃಢಪಟ್ಟಿದೆ.
ಇನ್ನೊಂದು ಕುಟುಂಬದ ಮುಖ್ಯಸ್ಥ ಬಾಲಕೃಷ್ಣ (48) ಅವರನ್ನು ರಕ್ಷಿಸಲಾಗಿದ್ದರೂ, ಅವರ ಪತ್ನಿ ಶಾಂತಾ ಅವಶೇಷಗಳಡಿ ಸಿಲುಕಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಭೂಕುಸಿತದ ಪರಿಣಾಮ ಮಣ್ಣು ಮನೆ ಮೇಲೆ ಕುಸಿದು ಬಿದ್ದಿದ್ದು, ಒಟ್ಟು ಆರು ಮಂದಿ ಸಿಲುಕಿಕೊಂಡಿದ್ದರು. ರಕ್ಷಣಾ ಕಾರ್ಯಾಚರಣೆಯ ಮೂಲಕ ಮೂವರನ್ನು ಜೀವಂತವಾಗಿ ಹೊರತೆಗೆದಿದ್ದು, ಉಳಿದ ಮೂವರು ಮೃತಪಟ್ಟಿದ್ದಾರೆ.

ಘಟನಾ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಜಿಲ್ಲಾಧಿಕಾರಿ ದರ್ಶನ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯ ಅವಲೋಕನ ನಡೆಸಿದರು.


