Breaking
30 Jun 2026, Tue

ಸರಕಾರಿ ಪದವಿ ಪೂರ್ವ ಕಾಲೇಜು ಸಜೀಪ ಮೂಡದಲ್ಲಿ ಅಂತರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನಾಚರಣೆ ಅಂಗವಾಗಿ ಸ್ವಾಸ್ಥ್ಯ ಸಂಕಲ್ಪ ಆನ್ ಲೈನ್ ಮಾಹಿತಿ ಕಾರ್ಯಕ್ರಮ

ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ.) ಬಂಟ್ವಾಳ ಇದರ ಜನಜಾಗೃತಿ ವೇದಿಕೆ ಬಂಟ್ವಾಳ ವತಿಯಿಂದ ಗ್ರಾಮಾಭಿವೃದ್ಧಿ ಯೋಜನೆ ಪಾಣೆಮಂಗಳೂರು ಕಾರ್ಯಕ್ಷೇತ್ರದ ಸರಕಾರಿ ಪದವಿ ಪೂರ್ವ ಕಾಲೇಜು ಸಜೀಪ ಮೂಡದಲ್ಲಿ ಅಂತರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನಾಚರಣೆ ಅಂಗವಾಗಿ ಸ್ವಾಸ್ಥ್ಯ ಸಂಕಲ್ಪ ಆನ್ ಲೈನ್ ಮಾಹಿತಿ ಕಾರ್ಯಕ್ರಮ ಜೂನ್ 30ರಂದು ಮಂಗಳವಾರ ಜರಗಿತು.

ಬಂಟ್ವಾಳ ನಗರ ಪೊಲೀಸ್ ಠಾಣೆ ಸಹಾಯಕ ಪೊಲೀಸ್ ಉಪ ನಿರೀಕ್ಷಕ ತಾರನಾಥ್ ಕುಮಾರ್ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ರಾಜ್ಯದ ಸುಮಾರು 1011 ಶಾಲಾ ಕಾಲೇಜುಗಳಲ್ಲಿ ಯುವ ಜನತೆಗೆ ದುಶ್ಚಟಗಳ ವಿರುದ್ಧ ಜಾಗೃತಿ ಮೂಡಿಸಲು ಏಕಕಾಲದಲ್ಲಿ ಆನ್ ಲೈನ್ ಮೂಲಕ ಗಣ್ಯ ವ್ಯಕ್ತಿಗಳಿಂದ ಮಾಹಿತಿ ನೀಡುವ ಕಾರ್ಯಕ್ರಮವಾಗಿದ್ದು, ಬೆಂಗಳೂರು ಎಸ್ ಪಿ ಡಾ. ವೆಂಕಟೇಶ್ ಪ್ರಸನ್ನ, ಬೆಂಗಳೂರಿನ ಖ್ಯಾತ ಹೃದಯ ರೋಗ ತಜ್ಞ ಡಾಕ್ಟರ್ ದೇವಿ ಪ್ರಸಾದ್, ಆನ್ ಲೈನ್ ನಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಸೂಕ್ತ ಮಾಹಿತಿ ನೀಡಿದರು.

ಧರ್ಮಸ್ಥಳ ಧರ್ಮಾಧಿಕಾರಿ ಡಾಕ್ಟರ್ ವೀರೇಂದ್ರ ಹೆಗಡೆ, ಹೇಮಾವತಿ ಹೆಗ್ಡೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯ ನಿರ್ವಹಣಾಧಿಕಾರಿ ಅನಿಲ್ ಕುಮಾರ್, ಜನಜಾಗೃತಿ ವೇದಿಕೆಯ ವಿವೇಕ್ ವಿನ್ಸೆಂಟ್ ಪಾಯಸ್ ನೇರ ಸಂಪರ್ಕದಲ್ಲಿದ್ದು ಕಾರ್ಯಕ್ರಮವನ್ನು ವೀಕ್ಷಿಸಿದರು.

ಸರಕಾರಿ ಪದವಿ ಪೂರ್ವ ಕಾಲೇಜು ಸಜೀಪಮೂಡದಲ್ಲಿ ಆನ್ ಲೈನ್ ಕಾರ್ಯಕ್ರಮದ ನಂತರ ಜನಜಾಗೃತಿ ವೇದಿಕೆ ಜಿಲ್ಲಾ ಅಧ್ಯಕ್ಷ ಪ್ರಕಾಶ್ ಕಾರಂತ್ ಮಾತನಾಡಿ, ಆನ್ ಲೈನ್ ಮೂಲಕ ಗಣ್ಯರು ನೀಡಿದ ಮಾಹಿತಿಯನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ರೂಢಿಸಕೊಳ್ಳಬೇಕು ಎಂದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲೆ 1 ರ ನಿರ್ದೇಶಕ ದಿನೇಶ್ ಡಿ ಮಾತನಾಡಿ, ಮಕ್ಕಳು ಕೆಟ್ಟ ಅಭ್ಯಾಸಗಳನ್ನು ಬಿಟ್ಟು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ತಮ್ಮೂರಿಗೆ ಕೀರ್ತಿ ತರುವ ವ್ಯಕ್ತಿಗಳಾಗಬೇಕು ಎಂದರು.

ಬಂಟ್ವಾಳ ನಗರ ಪೊಲೀಸ್ ಠಾಣೆ ಪೊಲೀಸ್ ಹೆಡ್ ಕಾನ್ಸ್ಟೇಬಲ್ ರಕ್ಷಿತ್ ರೈ, ಕಾಲೇಜು ಪ್ರಾಂಶುಪಾಲ ಏನ್ ಎಸ್ ಜೈರಾಬಿ, ಸಜೀಪ ಮೂಢ ಒಕ್ಕೂಟ ಅಧ್ಯಕ್ಷೆ ಹರಿಣಾಕ್ಷಿ, ಸೇವಾ ಪ್ರತಿನಿಧಿ ಬಬಿತಾ ಮೊದಲಾದವರು ಉಪಸ್ಥಿತರಿದ್ದರು. ಉಪನ್ಯಾಸಕಿ ಸ್ಪೂರ್ತಿ ಸ್ವಾಗತಿಸಿ, ಪಾಣೆಮಂಗಳೂರು ವಲಯ ಮೇಲ್ವಿಚಾರಕಿ ಶಿವಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *