Breaking
30 Jun 2026, Tue

400 ಕೆ.ವಿ. ವಿದ್ಯುತ್ ಯೋಜನೆ: ಬಾಕಿ ಪರಿಹಾರ ತ್ವರಿತ ವಿತರಣೆಗೆ ಶಾಸಕರ ಸೂಚನೆ

ಬಂಟ್ವಾಳ: ಉಡುಪಿ–ಕಾಸರಗೋಡು 400 ಕೆ.ವಿ. ವಿದ್ಯುತ್ ಪ್ರಸರಣ ಮಾರ್ಗ ಯೋಜನೆಯಿಂದ ಕೃಷಿ ಭೂಮಿ ಕಳೆದುಕೊಂಡು ಇನ್ನೂ ಪರಿಹಾರ ಪಡೆಯದ ರೈತರ ಸಮಸ್ಯೆಗಳ ಕುರಿತು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಬಿ.ಸಿ.ರೋಡ್‌ನ ತಮ್ಮ ಕಚೇರಿಯಲ್ಲಿ ಸಂತ್ರಸ್ತ ರೈತರು ಹಾಗೂ ಸಂಬಂಧಿತ ಇಲಾಖೆಯ ಅಧಿಕಾರಿಗಳೊಂದಿಗೆ ವಿಶೇಷ ಸಭೆ ನಡೆಸಿದರು ಹಾಗೂ ಬಾಕಿ ಉಳಿದಿರುವ ಪರಿಹಾರವನ್ನು ತ್ವರಿತವಾಗಿ ವಿತರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಉಡುಪಿ ಜಿಲ್ಲೆಯಿಂದ ಕಾಸರಗೋಡು ಜಿಲ್ಲೆಗೆ ಸಂಪರ್ಕ ಕಲ್ಪಿಸುವ 400 ಕೆ.ವಿ. ವಿದ್ಯುತ್ ಪ್ರಸರಣ ಮಾರ್ಗವು ಬಂಟ್ವಾಳ ತಾಲೂಕಿನ ಹಲವು ಗ್ರಾಮಗಳ ಮೂಲಕ ಹಾದು ಹೋಗಿದ್ದು, ಯೋಜನೆಗಾಗಿ ನೂರಾರು ರೈತರ ಕೃಷಿ ಭೂಮಿ ಬಳಸಿಕೊಳ್ಳಲಾಗಿದೆ. ಬಹುತೇಕ ಫಲಾನುಭವಿಗಳಿಗೆ ಪರಿಹಾರ ವಿತರಿಸಲಾಗಿದ್ದರೂ, ಆದರೆ ಕೆಲ ಪ್ರಕರಣಗಳಲ್ಲಿ ಜಮೀನಿನ ದಾಖಲೆಗಳ ವ್ಯತ್ಯಾಸ, ತಾಂತ್ರಿಕ ಅಡಚಣೆಗಳು ಹಾಗೂ ಆಡಳಿತಾತ್ಮಕ ಪ್ರಕ್ರಿಯೆಗಳ ಕಾರಣಗಳಿಂದ ಕೆಲವು ರೈತರಿಗೆ ಇನ್ನೂ ಪರಿಹಾರ ಬಿಡುಗಡೆಯಾಗದೆ ಬಾಕಿ ಉಳಿದಿದೆ ಎಂದು ರೈತರು ಸಭೆಯಲ್ಲಿ ಶಾಸಕರ ಗಮನಕ್ಕೆ ತಂದರು.

ಸಭೆಯಲ್ಲಿ ಮಾತನಾಡಿದ ರೈತರು, ತಮ್ಮ ಕೃಷಿ ಭೂಮಿಯನ್ನು ಸಾರ್ವಜನಿಕ ಹಿತ ದೃಷ್ಟಿಯಿಂದ ಯೋಜನೆಗೆ ನೀಡಿದ್ದರೂ, ದೀರ್ಘಕಾಲದಿಂದ ಪರಿಹಾರ ಸಿಗದೇ ಆರ್ಥಿಕ ಸಂಕಷ್ಟ ಎದುರಿಸುತ್ತಿರುವುದಾಗಿ ಅಳಲು ತೋಡಿಕೊಂಡರು. ಕೆಲವು ಕುಟುಂಬಗಳು ಸಂಪೂರ್ಣವಾಗಿ ಕೃಷಿಯನ್ನೇ ಅವಲಿಂಬಿಸಿದ್ದು, ಭೂಮಿ ಕಳೆದುಕೊಂಡ ನಂತರ ಜೀವನೋಪಾಯದ ಮೇಲೆ ಗಂಭೀರ ಪರಿಣಾಮ ಬೀರಿದೆ. ಹೀಗಾಗಿ ಬಾಕಿ ಇರುವ ಎಲ್ಲಾ ಪ್ರಕರಣಗಳನ್ನು ವಿಳಂಬವಿಲ್ಲದೆ ಇತ್ಯರ್ಥಪಡಿಸಿ, ಸರ್ಕಾರದ ನಿಯಮಾನುಸರ ಪರಿಹಾರ ಬಿಡುಗಡೆ ಮಾಡುವಂತೆ ಮನವಿ ಮಾಡಿದರು.

ರೈತರ ಅಹವಾಲುಗಳನ್ನು ಆಲಿಸಿದ ಶಾಸಕ ರಾಜೇಶ್ ನಾಯ್ಕ್, ಸಾರ್ವಜನಿಕ ಅಭಿವೃದ್ಧಿ ಯೋಜನೆಗಳ ಹೆಸರಿನಲ್ಲಿ ರೈತರಿಗೆ ಅನ್ಯಾಯವಾಗಬಾರದು ಎಂದು ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದರು. ಪರಿಹಾರ ವಿತರಣೆಯಲ್ಲಿ ಎದುರಾಗಿರುವ ದಾಖಲೆ ಹಾಗೂ ತಾಂತ್ರಿಕ ಸಮಸ್ಯೆಗಳನ್ನು ವೈಯಕ್ತಿಕವಾಗಿ ಪರಿಶೀಲಿಸಿ, ಕಾನೂನು ಹಾಗೂ ಸರ್ಕಾರದ ನಿಯಮಾವಳಿಗಳ ವ್ಯಾಪ್ತಿಯಲ್ಲಿ ಶೀಘ್ರವಾಗಿ ಇತ್ಯರ್ಥಪಡಿಸುವಂತೆ ಸೂಚನೆ ನೀಡಿದರು.

ಈಗಾಗಲೇ ಬಾಕಿ ಉಳಿದಿರುವ ಪ್ರತಿಯೊಂದು ಪ್ರಕರಣದ ಪ್ರಗತಿಯನ್ನು ಪರಿಶೀಲಿಸಿ ಸಂಬಂಧಪಟ್ಟಿ ಇಲಾಖೆ ಮತ್ತು ಯೋಜನಾಧಿಕಾರಿಗಳ ನಡುವೆ ಸಮನ್ವಯ ಸಾಧಿಸುವ ಮೂಲಕ ಪರಿಹಾರ ಪ್ರಕ್ರಿಯೆಯನ್ನು ವೇಗಗೊಳಿಸಬೇಕು. ಅರ್ಹ ರೈತರಿಗೆ ಯಾವುದೇ ಅನಗತ್ಯ ವಿಳಂಬವಾಗದಂತೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ನಿರ್ದೇಶನ ನೀಡಿದರು.

ಸಭೆಯಲ್ಲಿ ತಾಲೂಕು ತಹಶೀಲ್ದಾರ್ ಮಂಜುನಾಥ್, ಕಂದಾಯ ನಿರೀಕ್ಷಕ ಜನಾರ್ದನ, ಯೋಜನೆಯ ಪ್ರಾಜೆಕ್ಟ್ ಹೆಡ್ ವೆಂಕಟೇಶ್ ಪೂಜಾರಿ, ಮ್ಯಾನೇಜರ್ ಗಳಾದ ಅಭಿಷೇಕ್ ಹಾಗೂ ಆಗ್ನಲ್ ಗೊಂಝಾಲ್ವೆಸ್, ಸಹಾಯಕ ವ್ಯವಸ್ಥಾಪಕರಾದ ರೋಹಿತ್ ಮತ್ತು ಸಚಿನ್, ಅಧಿಕಾರಿ ಝೇರಾಮ್ ಸೇರಿದಂತೆ ಸಂಬಂಧಿತ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದು, ರೈತರು ಪ್ರಸ್ತಾಪಿಸಿದ ಪ್ರತಿಯೊಂದು ಪ್ರಕರಣವನ್ನು ಪರಿಶೀಲಿಸಿ ಶೀಘ್ರದಲ್ಲಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಸಭೆಯಲ್ಲಿ ವಿವಿಧ ಗ್ರಾಮಗಳ ಸಂತ್ರಸ್ತ ರೈತರು ಭಾಗವಹಿಸಿ ತಮ್ಮ ಸಮಸ್ಯೆಗಳು ಹಾಗೂ ದಾಖಲೆಗಳಿಗೆ ಸಂಬಂಧಿಸಿದ ಅಡಚಣೆಗಳನ್ನು ಅಧಿಕಾರಿಗಳು ಗಮನಕ್ಕೆ ತಂದರು.

Leave a Reply

Your email address will not be published. Required fields are marked *