ಪಣಂಬೂರು: ಸೋಮವಾರ ನಸುಕಿನ ವೇಳೆ ಬೈಕಂಪಾಡಿ ಬಳಿ ನಡೆದ ಚಿನ್ನಾಭರಣ ವ್ಯಾಪಾರಿಯ ದರೋಡೆ ಪ್ರಕರಣದ ತನಿಖೆಗೆ ಹೊಸ ತಿರುವು ಸಿಕ್ಕಿದೆ. ದುಷ್ಕರ್ಮಿಗಳು ಅಪಹರಿಸಿದ್ದ ಕಾರು ಬಂಟ್ವಾಳ ಠಾಣೆ ವ್ಯಾಪ್ತಿಯ ಬೆಂಜನಪದವಿನಲ್ಲಿ ಪತ್ತೆಯಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ಆರೋಪಿಗಳು ಕಾರನ್ನು ತ್ಯಜಿಸಿ ಪರಾರಿಯಾಗಿದ್ದು, ಕಾರಿನ ಸೀಟ್ ಕವರ್ಗಳನ್ನು ಹರಿದು ಸಂಪೂರ್ಣವಾಗಿ ಶೋಧಿಸಿರುವುದು ಗಮನಕ್ಕೆ ಬಂದಿದೆ. ಕಾರಿನೊಳಗೆ ಬೆಲೆಬಾಳುವ ವಸ್ತುಗಳನ್ನು ಅಡಗಿಸಿಟ್ಟಿರಬಹುದೆಂಬ ಅನುಮಾನದಿಂದ ಸೀಟುಗಳನ್ನು ಹರಿದು ಪರಿಶೀಲಿಸಿರುವ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆದರೆ ದರೋಡೆಕೋರರು ಕಸಿದುಕೊಂಡ ಮೊಬೈಲ್ ಇನ್ನೂ ಪತ್ತೆಯಾಗಿಲ್ಲ. ಮೊಬೈಲ್ ಸ್ವಿಚ್ ಆಫ್ ಆಗಿರುವುದರಿಂದ ಅದನ್ನು ನಾಶಪಡಿಸಿರುವ ಅಥವಾ ಎಸೆದಿರುವ ಶಂಕೆ ವ್ಯಕ್ತವಾಗಿದೆ. ಮೊಬೈಲ್ ಟವರ್ ಡಂಪ್ ಆಧರಿಸಿ ಆರೋಪಿಗಳ ಜಾಡು ಹಿಡಿಯಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.

ವ್ಯಾಪಾರಿಯ ಕಾರು ಬೆಂಜನಪದವಿನಲ್ಲಿ ಪತ್ತೆಯಾಗಿರುವ ಹಿನ್ನೆಲೆ, ದರೋಡೆಕೋರರು ಬಳಸಿದ ಮೂರು ಕಾರುಗಳು ಇದೇ ಮಾರ್ಗವಾಗಿ ಸಂಚರಿಸಿದ್ದಿರಬಹುದು ಎಂದು ಅಂದಾಜಿಸಲಾಗಿದೆ. ಹೆದ್ದಾರಿ ಮೂಲಕ ಬೆಂಗಳೂರು, ಕೊಡಗು ಮಾರ್ಗವಾಗಿ ಕೇರಳ, ಧರ್ಮಸ್ಥಳ ಮಾರ್ಗವಾಗಿ ಚಿಕ್ಕಮಗಳೂರು ಅಥವಾ ತಲಪಾಡಿ ಮಾರ್ಗವಾಗಿ ಕೇರಳಕ್ಕೆ ಪರಾರಿಯಾಗಿರುವ ಸಾಧ್ಯತೆ ಇದೆ.

ಈ ಹಿನ್ನೆಲೆಯಲ್ಲಿ ಟೋಲ್ ಗೇಟ್‌ಗಳು ಹಾಗೂ ಪ್ರಮುಖ ಜಂಕ್ಷನ್‌ಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಕಲೆಹಾಕುತ್ತಿದ್ದಾರೆ. ಒಳರಸ್ತೆಗಳನ್ನು ಬಳಸಿಕೊಂಡು ಆರೋಪಿಗಳು ಪರಾರಿಯಾಗಿದ್ದರೆ ತನಿಖೆಗೆ ಸವಾಲಾಗುವ ಸಾಧ್ಯತೆಯಿದೆ.

ಕೃತ್ಯಕ್ಕೆ ಬಳಸಿದ ಕಾರುಗಳನ್ನು ಆರೋಪಿಗಳೇ ಬಾಡಿಗೆಗೆ ಪಡೆದಿರಬಹುದೇ ಅಥವಾ ಕಳ್ಳತನ ಮಾಡಿ ಬಳಸಿರಬಹುದೇ ಎಂಬ ಆಯಾಮದಲ್ಲಿಯೂ ತನಿಖೆ ನಡೆಯುತ್ತಿದೆ. ಬಾಡಿಗೆ ಕಾರು ಏಜೆನ್ಸಿಗಳು, ಸೆಕೆಂಡ್ ಹ್ಯಾಂಡ್ ವಾಹನ ಡೀಲರ್‌ಗಳ ಮಾಹಿತಿ ಸಂಗ್ರಹವಾಗುತ್ತಿದ್ದು, ವಾಹನಗಳ ನೋಂದಣಿ ಸಂಖ್ಯೆ ನಕಲಿ ಆಗಿರುವ ಶಂಕೆಯೂ ವ್ಯಕ್ತವಾಗಿದೆ. ಈ ಹಿನ್ನೆಲೆ ಆರ್‌ಟಿಒ ದಾಖಲೆಗಳ ಪರಿಶೀಲನೆಗೂ ಪೊಲೀಸರು ಮುಂದಾಗಿದ್ದಾರೆ.

ಮುಂಜಾನೆ 2.30ರ ಸುಮಾರಿಗೆ ಮೂರು ಕಾರುಗಳಲ್ಲಿ ಬಂದ ದುಷ್ಕರ್ಮಿಗಳು ವ್ಯಾಪಾರಿಯ ಕಾರನ್ನು ಅಡ್ಡಗಟ್ಟಿ, ಕಾರು ಸಹಿತ 180 ಗ್ರಾಂ ಚಿನ್ನ, ನಗದು ಹಾಗೂ ಮೊಬೈಲ್ ದೋಚಿಕೊಂಡು ಪರಾರಿಯಾಗಿದ್ದರು. ಸಿಸಿಟಿವಿ ದೃಶ್ಯಗಳು, ಮೊಬೈಲ್ ಟವರ್ ಲೊಕೇಶನ್ ಹಾಗೂ ಇತರೆ ಸುಳಿವುಗಳ ಆಧಾರದಲ್ಲಿ ತನಿಖೆ ಮುಂದುವರಿದಿದ್ದು, ಬೈಕಂಪಾಡಿ ಹಾಗೂ ಪಣಂಬೂರು ಭಾಗದಲ್ಲಿ ರಾತ್ರಿ ಗಸ್ತು ಹೆಚ್ಚಿಸಲಾಗಿದೆ.


