ಮಂಗಳೂರು: ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ವತಿಯಿಂದ ಜಾರಿಗೊಳಿಸಲಾಗಿದ್ದ ರಾಸುವಿನ ಭ್ರೂಣ ವರ್ಗಾವಣೆ ಕಾರ್ಯಕ್ರಮದ ಮೊದಲ ಪ್ರಯೋಗ ಯಶಸ್ವಿಯಾಗಿದ್ದು, ಆರೋಗ್ಯವಂತ ಜರ್ಸಿ ಹೆಣ್ಣು ಕರುವಿನ ಜನನವಾಗಿದೆ.

ಈ ಯೋಜನೆಗೆ 2025ರ ಅಕ್ಟೋಬರ್ 11ರಂದು ದಕ್ಷಿಣ ಕನ್ನಡ ಹಾಲು ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ ಚಾಲನೆ ನೀಡಿದ್ದರು. ಅದರಂತೆ ಅಕ್ಟೋಬರ್ 12ರಂದು ಬಂದಾರು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಸದಸ್ಯೆ ಶ್ರೀಮತಿ ರೇವತಿ ಗಂಗಯ್ಯ ಪೆಲತ್ತಿ ಮಾರು ಅವರ ಮನೆಯಲ್ಲಿ ರಾಸುವಿಗೆ ಭ್ರೂಣ ವರ್ಗಾವಣೆ ಮಾಡಲಾಗಿತ್ತು. ಯಶಸ್ವಿ ಗರ್ಭಧಾರಣೆಯ ಬಳಿಕ 2026ರ ಜೂನ್ 25ರಂದು ಆರೋಗ್ಯವಂತ ಜರ್ಸಿ ಹೆಣ್ಣು ಕರು ಜನಿಸಿದ್ದು, ಜಿಲ್ಲೆಯ ಹೈನುಗಾರಿಕೆ ಕ್ಷೇತ್ರದಲ್ಲಿ ಇದು ಮಹತ್ವದ ಸಾಧನೆಯಾಗಿ ಗುರುತಿಸಿಕೊಂಡಿದೆ.

ಉಪ್ಪಿನಂಗಡಿ ಶಿಬಿರ ಕಚೇರಿಯ ಪಶುವೈದ್ಯರ ಮೇಲುಸ್ತುವಾರಿಯಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದ್ದು, ಯೋಜನೆಯ ಒಟ್ಟು ವೆಚ್ಚ ₹21,000 ಆಗಿದೆ. ಇದರಲ್ಲಿ ದಕ್ಷಿಣ ಕನ್ನಡ ಹಾಲು ಒಕ್ಕೂಟ ₹5,000, ಕರ್ನಾಟಕ ಹಾಲು ಮಹಾಮಂಡಳಿ ₹10,000, ಕೇಂದ್ರ ಸರ್ಕಾರದ ರಾಷ್ಟ್ರೀಯ ಗೋಕುಲ ಮಿಷನ್ ₹5,000 ಹಾಗೂ ಫಲಾನುಭವಿ ರೈತರಿಂದ ₹1,000 ಸಹಾಯಧನ ಒದಗಿಸಲಾಗಿದೆ.

ಯೋಜನೆಯ ವಿಶೇಷವೆಂದರೆ, ಹಸುವಿನ ಗರ್ಭಧಾರಣೆ ಮೂರು ತಿಂಗಳು ಯಶಸ್ವಿಯಾಗಿ ದೃಢಪಟ್ಟ ಬಳಿಕ ಮಾತ್ರ ಫಲಾನುಭವಿ ರೈತರು ತಮ್ಮ ಪಾಲಿನ ₹1,000 ಪಾವತಿಸುತ್ತಾರೆ.

ಒಟ್ಟು 25 ರಾಸುಗಳಲ್ಲಿ ಭ್ರೂಣ ವರ್ಗಾವಣೆ ಪ್ರಯೋಗ ನಡೆಸಲಾಗಿದ್ದು, ಇದುವರೆಗೆ 5 ರಾಸುಗಳಲ್ಲಿ ಯಶಸ್ವಿ ಗರ್ಭಧಾರಣೆ ದಾಖಲಾಗಿದೆ.
ಉತ್ತಮ ತಳಿಯ ಹಸುಗಳ ಅಭಿವೃದ್ಧಿ, ಹಾಲು ಉತ್ಪಾದನೆ ಹೆಚ್ಚಳ ಹಾಗೂ ರೈತರ ಆದಾಯ ವೃದ್ಧಿಗೆ ಈ ಯೋಜನೆ ನೆರವಾಗಲಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಹೈನುಗಾರಿಕೆಯಲ್ಲಿ ಆಧುನಿಕ ತಂತ್ರಜ್ಞಾನದ ಬಳಕೆಗೆ ಹೊಸ ಮೈಲಿಗಲ್ಲಾಗಿದೆ.


