Breaking
1 Jul 2026, Wed

ಸದಸ್ಯತ್ವದ ಅರಿವಿನಿಂದ ನಾಯಕತ್ವದ ಬೆಳಕಿನೆಡೆಗೆ ಯುವ ಪಯಣ : ರಾಜೇಶ್ ಸುವರ್ಣ

ಮಾಣಿ: ಯುವ ಮನಸ್ಸುಗಳಲ್ಲಿ ಕನಸುಗಳ ಕಿಡಿ ಹೊತ್ತಿಸಿ, ಸೇವೆಯ ಸಂಕಲ್ಪಕ್ಕೆ ಶಕ್ತಿ ತುಂಬುವ ಉದ್ದೇಶದಿಂದ ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ ಸದಸ್ಯತ್ವ ಅರಿವು ಹಾಗೂ ನಾಯಕತ್ವ ತರಬೇತಿ ಶಿಬಿರವು ಮಾಣಿ ಕರ್ನಾಟಕ ಪ್ರೌಢಶಾಲೆಯ ಸಭಾಭವನದಲ್ಲಿ ಜರಗಿತು.

“ಯುವಶಕ್ತಿ ಜಾಗೃತಿಯಾದರೆ ಸಮಾಜದ ನಾಳೆ ಬೆಳಗುತ್ತದೆ” ಎಂಬ ಆಶಯದೊಂದಿಗೆ ನಡೆದ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಯುವ ವಾಹಿನಿ ಕೇಂದ್ರ ಸಮಿತಿಯ ಬೈಲಾ ತಿದ್ದುಪಡಿ ಸಮಿತಿ ಸಂಚಾಲಕ ರಾಜೇಶ್ ಸುವರ್ಣ ಬಿಸಿ ರೋಡ್ರವರು ಯುವಕರಿಗೆ ಪ್ರೇರಣಾದಾಯಕ ವಿಚಾರಗಳನ್ನು ಹಂಚಿಕೊಂಡು
“ಸದಸ್ಯತ್ವ ಎನ್ನುವುದು ಕೇವಲ ಒಂದು ಗುರುತಿನ ಚೀಟಿ ಅಲ್ಲ; ಅದು ಸಮಾಜದ ನೋವುಗಳಿಗೆ ಸ್ಪಂದಿಸುವ ಹೃದಯ, ಬದಲಾವಣೆಯ ಕನಸು ಕಾಣುವ ಮನಸ್ಸು ಮತ್ತು ಸೇವೆಯ ಹಾದಿಯಲ್ಲಿ ಸಾಗುವ ಸಂಕಲ್ಪ” ಎಂದರು.

ವಿದ್ಯೆ ಬದುಕಿಗೆ ಬೆಳಕು ನೀಡುವ ದೀಪವಾದರೆ, ಕೌಶಲ್ಯ ಆ ಬೆಳಕನ್ನು ಅವಕಾಶಗಳತ್ತ ಕೊಂಡೊಯ್ಯುವ ಸೇತುವೆಯಾಗಿದೆ. ಯುವಕರು ತಮ್ಮ ಜ್ಞಾನವನ್ನು ಕೇವಲ ಉದ್ಯೋಗದ ಹುಡುಕಾಟಕ್ಕೆ ಸೀಮಿತಗೊಳಿಸದೆ, ಹೊಸ ಅವಕಾಶಗಳನ್ನು ಸೃಷ್ಟಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದು ಅವರು ತಿಳಿಸಿ,
ನಾಯಕತ್ವವೆಂದರೆ ಮುಂದೆ ನಿಲ್ಲುವುದಷ್ಟೇ ಅಲ್ಲ, ಎಲ್ಲರನ್ನೂ ಜೊತೆಗೂಡಿಸಿಕೊಂಡು ಸಾಗುವ ಗುಣ, ಜವಾಬ್ದಾರಿಯನ್ನು ಹೊರುವ ಧೈರ್ಯ ಮತ್ತು ಸಮಾಜದ ಒಳಿತಿಗಾಗಿ ಹೃದಯಪೂರ್ವಕವಾಗಿ ದುಡಿಯುವ ಮನೋಭಾವ ಎಂದು ವಿವರಿಸಿದರು.

ಯುವವಾಹಿನಿಯಂತಹ ಸಂಘಟನೆಗಳು ಯುವ ಪ್ರತಿಭೆಗಳಿಗೆ ವೇದಿಕೆ ನೀಡಿ, ಸೇವೆಯ ಮೌಲ್ಯಗಳನ್ನು ಬೆಳೆಸಿ, ಭವಿಷ್ಯದ ನಾಯಕರನ್ನು ರೂಪಿಸುವ ಕಾರ್ಯ ಮಾಡುತ್ತಿವೆ. ಪ್ರತಿಯೊಬ್ಬ ಯುವಕನೊಳಗಿನ ಸಾಮರ್ಥ್ಯಕ್ಕೆ ಸರಿಯಾದ ದಿಕ್ಕು ದೊರೆತಾಗ, ಅದು ಕುಟುಂಬದ ಬೆಳಕಾಗಿ, ಸಮಾಜದ ಶಕ್ತಿಯಾಗಿ, ರಾಷ್ಟ್ರದ ಭರವಸೆಯಾಗಿ ಅರಳುತ್ತದೆ ಎಂಬ ಸಂದೇಶ ಶಿಬಿರದ ಮೂಲಕ ಮೂಡಿಬಂತು.

ಜ್ಞಾನ, ಕೌಶಲ್ಯ ಮತ್ತು ಸೇವಾ ಮನೋಭಾವದ ಸಂಗಮವಾದ ಈ ಶಿಬಿರವು ಯುವ ಹೃದಯಗಳಲ್ಲಿ ನಾಯಕತ್ವದ ಹೊಸ ಕನಸುಗಳನ್ನು ಬಿತ್ತಿದ ಸ್ಮರಣೀಯ ಕ್ಷಣವಾಗಿ ಮೂಡಿಬಂತು.
ಈ ಸಂದರ್ಭದಲ್ಲಿ ಯುವವಾಹಿನಿಯ ಕೇಂದ್ರ ಸಮಿತಿಯ ಅಧ್ಯಕ್ಷ ಅಶೋಕ್ ಪಡ್ಪು ಉಪಸ್ಥಿತರಿದ್ದು, ವಿದ್ಯೆ ಉದ್ಯೋಗದ ಸೇತುವೆ ಯಾದರೆ ನಾಯಕತ್ವ ಯಶಸ್ಸಿನ ದಾರಿಯಾಗುವುದು . ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ ಆಯೋಜಿಸಲಾದ ಈ ತರಬೇತಿ ಕಾರ್ಯಕ್ರಮವು ಕನಸು ಕಾಣುವ ಯುವ ಮನಸ್ಸುಗಳಿಗೆ ಸರಿಯಾದ ದಿಕ್ಕು ತೋರುವಂತಾಗಲಿ ಎಂದರು.


ತರಬೇತಿ ಕಾರ್ಯಕ್ರಮದಲ್ಲಿ ಮಾಣಿ ಯುವ ವಾಹಿನಿ ಘಟಕದ ಅಧ್ಯಕ್ಷರಾದ ಗಣೇಶ ಸಾಯಿ, ಕಾರ್ಯದರ್ಶಿ ವಿಶ್ವನಾಥ ಪೂಜಾರಿ, ಪದಾಧಿಕಾರಿಗಳು, ಮಾಜಿ ಅಧ್ಯಕ್ಷರು, ಸದಸ್ಯರು, ಬಂಟ್ವಾಳ ಘಟಕದ ಸಮಾಜ ನಿರ್ದೇಶಕ ಚಿನ್ನ ಕಲ್ಲಡ್ಕ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಡಾ. ತ್ರಿವೇಣಿ ರಮೇಶ್ ಸ್ವಾಗತಿಸಿ, ಪ್ರಶಾಂತ್ ಅನಂತಾಡಿ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *