ಮಾಣಿ: ತುಳುನಾಡಿನ ಮಣ್ಣಿನ ಸೊಗಡು, ಕೃಷಿ ಸಂಸ್ಕೃತಿ ಹಾಗೂ ಹಿರಿಯರು ಪಾಲಿಸಿಕೊಂಡು ಬಂದ ಸಂಪ್ರದಾಯಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ ಅ. 17ರಂದು ಬಿಲ್ಲವ ಕಿರೋಡಿಯನ್ಸ್ ಕುಟುಂಬಸ್ಥರ ಚಾವಡಿಯಲ್ಲಿ ‘ಪುದ್ದಾರ್ದ ಪೊರ್ಲು’ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಪ್ರಧಾನ ಮಾತುಗಾರರಾಗಿ ಭಾಗವಹಿಸಿದ ಲೋಕನಾಥ್ ತಿಮರಾಜೆ ಅವರು, ಹಿಂದಿನ ಕಾಲದಲ್ಲಿ ಭತ್ತ ಮತ್ತು ಅನ್ನಕ್ಕೆ ನೀಡುತ್ತಿದ್ದ ಮಹತ್ವವನ್ನು ವಿವರಿಸಿದರು. ಭತ್ತವನ್ನು ದೈವಸ್ವರೂಪವಾಗಿ ಕಂಡು, ಅನ್ನವನ್ನು ದೇವರ ಪ್ರಸಾದವೆಂದು ಗೌರವಿಸುವ ಸಂಪ್ರದಾಯ ನಮ್ಮ ಹಿರಿಯರಲ್ಲಿತ್ತು. ಹೊಸ ಭತ್ತದ ಆಗಮನದ ಸಂದರ್ಭದಲ್ಲಿ ಪೂಜೆ-ಪುನಸ್ಕಾರಗಳನ್ನು ನೆರವೇರಿಸುವ ಮೂಲಕ ಕೃಷಿ ಮತ್ತು ಅನ್ನದ ಮಹತ್ವವನ್ನು ಸಾರಲಾಗುತ್ತಿತ್ತು. ಅನ್ನವೆಂದರೆ ಕೇವಲ ಆಹಾರವಲ್ಲ; ಅದು ಬದುಕಿನ ಆಧಾರ ಹಾಗೂ ದೈವಿಕ ಸ್ವರೂಪ ಎಂಬ ಸಂದೇಶವನ್ನು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಕಿರೋಡಿಯನ್ಸ್ ಕುಟುಂಬದ ಮುಖ್ಯಸ್ಥರಾದ ಧರ್ಮಣ ಪೂಜಾರಿ, ಸುರೇಶ್ ಶಾಂತಿ, ದರ್ಣಪ್ಪ ಪೂಜಾರಿ, ರಾಜೇಶ್, ಸತೀಶ್, ಲೋಕೇಶ್, ಶ್ರೀಧರ್ ಪೂಜಾರಿ ಮುಜಲ, ಮೋಹನ್ ಪೂಜಾರಿ, ಬಾಲಕೃಷ್ಣ ಕೆರಕೋಡಿ, ಶುಭ, ಲಕ್ಷ್ಮಿ, ಪ್ರೇಮ ಸೇರಿದಂತೆ ಕುಟುಂಬದ ಸದಸ್ಯರು ಹಾಗೂ ಯುವವಾಹಿನಿ ಸದಸ್ಯರು ಉಪಸ್ಥಿತರಿದ್ದರು. ಯುವವಾಹಿನಿ ಕೇಂದ್ರ ಸಮಿತಿಯ ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ನಿರ್ದೇಶಕ ಹರೀಶ್ ಪೂಜಾರಿ ಬಾಕಿಲ ಅವರು ಭಾಗವಹಿಸಿದ್ದರು.

ಯುವವಾಹಿನಿ (ರಿ.) ಮಾಣಿ ಘಟಕದ ಅಧ್ಯಕ್ಷ ಗಣೇಶ್ ಪೂಜಾರಿ ಕೊಡಾಜೆ ಸ್ವಾಗತಿಸಿದರು. ಘಟಕದ ಕೋಶಾಧಿಕಾರಿ ತ್ರಿವೇಣಿ ರಮೇಶ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.


