ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಕರೋಪಾಡಿ ಗ್ರಾಮದ ಪದ್ಯಾಣ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಹಾಗೂ ಜೀರ್ಣೋದ್ಧಾರ ಕಾರ್ಯಕ್ಕೆ ಮಂಜೂರಾದ ₹5 ಲಕ್ಷ ಅನುದಾನದ ಡಿಡಿಯನ್ನು ಅಕ್ಟೋಬರ್ 17ರಂದು ದೇವಸ್ಥಾನದ ಆಡಳಿತ ಸಮಿತಿಗೆ ಹಸ್ತಾಂತರಿಸಲಾಯಿತು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ದಕ್ಷಿಣ ಕನ್ನಡ-2 ಜಿಲ್ಲೆಯ ನಿರ್ದೇಶಕ ಬಾಬು ನಾಯ್ಕ ಅವರು ದೇವಸ್ಥಾನದ ಆಡಳಿತ ಸಮಿತಿಗೆ ಡಿಡಿ ಹಸ್ತಾಂತರಿಸಿ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ಈವರೆಗೆ 17,500 ದೇವಸ್ಥಾನಗಳಿಗೆ ಅನುದಾನ ನೀಡಲಾಗಿದೆ. ಅದೇ ರೀತಿ, ರಾಜ್ಯದಲ್ಲಿ ಪ್ರತಿವರ್ಷ ಎರಡು ಬಾರಿ ಶ್ರದ್ಧಾಕೇಂದ್ರಗಳ ಸ್ವಚ್ಛತಾ ಕಾರ್ಯವನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಈವರೆಗೆ 6,000 ದೇವಸ್ಥಾನಗಳನ್ನು ಸ್ವಚ್ಛಗೊಳಿಸಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರ ಸತ್ಯನಾರಾಯಣ ಭಟ್, ವಲಯ ಜನಜಾಗೃತಿ ಅಧ್ಯಕ್ಷ ರಾಧಾಕೃಷ್ಣ ಚೆಲ್ಲಡ್ಕ, ಯೋಜನಾಧಿಕಾರಿ ಸುರೇಶ್ ಗೌಡ, ಒಕ್ಕೂಟದ ಅಧ್ಯಕ್ಷರುಗಳು, ಶೌರ್ಯ ಘಟಕದ ಅಧ್ಯಕ್ಷ ಪುಷ್ಪಕರ ರೈ ಹಾಗೂ ಕೇಪು ವಲಯದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವಲಯದ ಮೇಲ್ವಿಚಾರಕ ಚಂದ್ರಶೇಖರ ಕಾರ್ಯಕ್ರಮ ನಿರೂಪಿಸಿದರು. ಸೇವಾ ಪ್ರತಿನಿಧಿ ಮೀನಾಕ್ಷಿ ಸಹಕರಿಸಿದರು.




