Breaking
17 Oct 2026, Sat

ಗೃಹಲಕ್ಷ್ಮಿ ಹಣ ಕೂಡಿಟ್ಟು ಸ್ವಂತ ವಸ್ತ್ರಮಳಿಗೆ ಆರಂಭಿಸಿದ ಶಕುಂತಲಾ!

ಬಂಟ್ವಾಳ: ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು ದೊರೆಯುತ್ತಿದ್ದ ₹2 ಸಾವಿರ ಹಣವನ್ನು ಕೂಡಿಟ್ಟು, ಸ್ವಂತ ಟೈಲರಿಂಗ್ ಘಟಕ ಹಾಗೂ ವಸ್ತ್ರಮಳಿಗೆ ಆರಂಭಿಸುವ ಮೂಲಕ ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮದ ಮಾವಿನಕಟ್ಟೆಯ ಶಕುಂತಲಾ ಅವರು ಗಮನ ಸೆಳೆದಿದ್ದಾರೆ.
ಮಾವಿನಕಟ್ಟೆ ನಿವಾಸಿ ಹಾಗೂ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಯಾಗಿರುವ ಶಕುಂತಲಾ ಅವರು, ಕಳೆದ ಮೂರು ವರ್ಷಗಳಿಂದ ಸಂಗ್ರಹಿಸಿದ ₹72 ಸಾವಿರ ಗೃಹಲಕ್ಷ್ಮಿ ಹಣಕ್ಕೆ ಹೆಚ್ಚುವರಿ ಮೊತ್ತ ಸೇರಿಸಿ, ಒಟ್ಟು ₹2.50 ಲಕ್ಷ ವೆಚ್ಚದಲ್ಲಿ ‘ಶ್ರೀ ದುರ್ಗಾ ಗೃಹಲಕ್ಷ್ಮಿ ಟೆಕ್ಸ್ ಟೈಲ್ಸ್ & ಗಾರ್ಮೆಂಟ್ಸ್’ ಮಳಿಗೆಯನ್ನು ಆರಂಭಿಸಿದ್ದಾರೆ. ಎರಡು ಟೈಲರಿಂಗ್ ಯಂತ್ರಗಳನ್ನು ಒಳಗೊಂಡ ಈ ಮಳಿಗೆಯು ನವರಾತ್ರಿ ಉತ್ಸವದ ಹಿನ್ನೆಲೆಯಲ್ಲಿ ಗುರುವಾರ ಶುಭಾರಂಭಗೊಂಡಿತು.


ಮಳಿಗೆಗೆ ಬಂಟ್ವಾಳ ತಾಲೂಕು ಪಂಚಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷೆ ಜಯಂತಿ ವಿ. ಪೂಜಾರಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಮ್ತಾಜ್ ಹಾಗೂ ಜಿಲ್ಲಾ ಸಮಿತಿ ಉಪಾಧ್ಯಕ್ಷ ನಾರಾಯಣ ನಾಯ್ಕ ಭೇಟಿ ನೀಡಿ ಶಕುಂತಲಾ ಅವರನ್ನು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಯಂತಿ ವಿ. ಪೂಜಾರಿ, ಗೃಹಲಕ್ಷ್ಮಿ ಯೋಜನೆಯ ಹಣವನ್ನು ಸದುಪಯೋಗಪಡಿಸಿಕೊಂಡು ಸ್ವಂತ ಉದ್ಯಮ ಆರಂಭಿಸಿರುವ ಶಕುಂತಲಾ ಅವರ ಸಾಧನೆ ಇತರ ಮಹಿಳೆಯರಿಗೂ ಸ್ಫೂರ್ತಿಯಾಗಿದೆ. ಮಹಿಳೆಯರ ಸ್ವಾವಲಂಬನೆಗೆ ಇದು ಪ್ರೇರಣಾದಾಯಕ ಹೆಜ್ಜೆಯಾಗಿದೆ ಎಂದು ತಿಳಿಸಿದರು.


ಅಂಗನವಾಡಿ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿರುವ ಶಕುಂತಲಾ ಅವರು, “ಕಳೆದ ಮೂರು ವರ್ಷಗಳಿಂದ ಗೃಹಲಕ್ಷ್ಮಿ ಯೋಜನೆಯಡಿ ದೊರೆತ ಹಣವನ್ನು ಉಳಿಸಿ ₹72 ಸಾವಿರ ಸಂಗ್ರಹಿಸಿದ್ದೇನೆ. ಇದಕ್ಕೆ ಹೆಚ್ಚುವರಿ ಮೊತ್ತ ಸೇರಿಸಿ ಒಟ್ಟು ₹2.50 ಲಕ್ಷ ಹೂಡಿಕೆ ಮಾಡಿ, ಎರಡು ಟೈಲರಿಂಗ್ ಯಂತ್ರಗಳ ಸಹಿತ ವಸ್ತ್ರಮಳಿಗೆ ಆರಂಭಿಸಿದ್ದೇನೆ. ನನ್ನ ಪತಿ ಜಯಾನಂದ ಅವರು ಚಾಲಕ ವೃತ್ತಿಯಲ್ಲಿದ್ದು, ನಮ್ಮ ಇಬ್ಬರು ಪುತ್ರರು ವಿದ್ಯಾಭ್ಯಾಸ ಮಾಡುತ್ತಿದ್ದಾರೆ” ಎಂದು ತಮ್ಮ ಅನುಭವ ಹಂಚಿಕೊಂಡರು.


ಗೃಹಲಕ್ಷ್ಮಿ ಯೋಜನೆಯ ಹಣವನ್ನು ಉಳಿತಾಯ ಮಾಡಿ ಸ್ವಂತ ಉದ್ಯಮಕ್ಕೆ ಬಂಡವಾಳವನ್ನಾಗಿ ಪರಿವರ್ತಿಸಿರುವ ಶಕುಂತಲಾ ಅವರ ಪ್ರಯತ್ನ ಮಹಿಳಾ ಸ್ವಾವಲಂಬನೆಗೆ ಉತ್ತಮ ಉದಾಹರಣೆಯಾಗಿದೆ.

Leave a Reply

Your email address will not be published. Required fields are marked *