Breaking
17 Oct 2026, Sat

ಶಂಕರಾಚಾರ್ಯರು ಜ್ಞಾನದ ದಾರಿ ತೋರಿದ ದಾರ್ಶನಿಕರು: ರಾಧಾಕೃಷ್ಣ ಕಲ್ಚಾರ್

ಸಿದ್ದಕಟ್ಟೆ: ಶಂಕರ ಭಗವತ್ಪಾದರು ಜ್ಞಾನಕ್ಕೆ ಒತ್ತು ನೀಡಿ ಜಗತ್ತಿಗೆ ಹೊಸ ದರ್ಶನವನ್ನು ನೀಡಿದ ಮಹಾನ್ ದಾರ್ಶನಿಕರು ಎಂದು ಯಕ್ಷಗಾನ ಕಲಾವಿದ ಹಾಗೂ ಲೇಖಕ ರಾಧಾಕೃಷ್ಣ ಕಲ್ಚಾರ್ ಹೇಳಿದರು.

ಸಿದ್ದಕಟ್ಟೆಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಲಾದ ಪುತ್ತೂರು ಕೊಯಿಲ ಶ್ರೀನಿವಾಸ ರಾವ್ ತಾರಾ ಸ್ಮಾರಕ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತಮ್ಮ ಕಾಲದಲ್ಲಿ ಕರ್ಮಕಾಂಡಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದುದನ್ನು ಗಮನಿಸಿ, ಜ್ಞಾನಕಾಂಡದ ಮಹತ್ವವನ್ನು ಸಾರಿದವರು ಶಂಕರ ಭಗವತ್ಪಾದರು. ಸಾವಿರಾರು ವರ್ಷಗಳ ಹಿಂದಿನ ಉಪನಿಷತ್ತುಗಳ ತತ್ವಗಳನ್ನು ಅದ್ವೈತ ದರ್ಶನದ ಮೂಲಕ ಪ್ರಚುರಪಡಿಸಿದ ಅವರು, ತಾವು ಬೋಧಿಸಿದ ತತ್ವಗಳಂತೆಯೇ ಬದುಕಿದವರು. ಜೀವಾತ್ಮ ಮತ್ತು ಪರಮಾತ್ಮರ ನಡುವೆ ಭೇದವಿಲ್ಲದೆ, ಸಕಲ ಜೀವಿಗಳಲ್ಲೂ ಬ್ರಹ್ಮನನ್ನು ಕಾಣುವ ತತ್ವವನ್ನು ಸಾರುತ್ತಾ ಭಾರತಾದ್ಯಂತ ಸಂಚರಿಸಿ ಪೀಠಗಳನ್ನು ಸ್ಥಾಪಿಸಿದರು. ಕೇವಲ 32 ವರ್ಷಗಳ ಕಾಲ ಬದುಕಿದ್ದರೂ, ಆಧ್ಯಾತ್ಮಿಕ ಸಾಧನೆಯ ಮೂಲಕ ಜಗತ್ತಿಗೆ ಹೊಸ ಬೆಳಕನ್ನು ನೀಡಿದರು ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ಆಶಯ ಭಾಷಣ ಮಾಡಿದ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ಮಾತನಾಡಿ, ಸಾಹಿತ್ಯವು ನಮ್ಮ ಸಂವೇದನೆಯನ್ನು ಸೂಕ್ಷ್ಮಗೊಳಿಸುತ್ತದೆ. ದತ್ತಿ ಉಪನ್ಯಾಸಗಳ ಮೂಲಕ ಯುವ ಮನಸ್ಸುಗಳಲ್ಲಿ ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯ ಬಗ್ಗೆ ಆಸಕ್ತಿ ಮೂಡಿಸುವ ಕಾರ್ಯವನ್ನು ಕನ್ನಡ ಸಾಹಿತ್ಯ ಪರಿಷತ್ತು ಮಾಡುತ್ತಿದೆ. ವಿದ್ಯಾರ್ಥಿಗಳು ಓದುವ ಹವ್ಯಾಸ ಬೆಳೆಸಿಕೊಳ್ಳುವುದರ ಜತೆಗೆ ಬರೆಯುವ ಅಭ್ಯಾಸವನ್ನೂ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಗಿರೀಶ ಭಟ್ ಅಜಕ್ಕಳ ಮಾತನಾಡಿ, ಶಂಕರಾಚಾರ್ಯರು ಕಲ್ಪನಾಧಾರಿತ ಕಾವ್ಯ ಮತ್ತು ಸ್ತೋತ್ರಗಳ ಜತೆಗೆ ಚಿಂತನೆ, ವೈಚಾರಿಕ ತರ್ಕ ಹಾಗೂ ಆಧ್ಯಾತ್ಮಿಕ ಅನುಭವಗಳ ಹಿನ್ನೆಲೆಯಲ್ಲಿ ದಾರ್ಶನಿಕ ಸಾಹಿತ್ಯವನ್ನೂ ರಚಿಸಿದ್ದಾರೆ. ವೇದೋಪನಿಷತ್ತುಗಳಲ್ಲಿನ ಮೌಲ್ಯಗಳನ್ನು ಜನರಿಗೆ ಅರ್ಥವಾಗುವಂತೆ ತಿಳಿಸಲು ಭಾಷ್ಯಗಳನ್ನು ಬರೆದಿದ್ದಾರೆ. ಸಂಸ್ಕೃತ ಸಾಹಿತ್ಯ ಜಗತ್ತಿನಲ್ಲಿ ಶಂಕರ ಭಗವತ್ಪಾದರ ಕೃತಿಗಳು ಇಂದಿಗೂ ನಿತ್ಯನೂತನವಾಗಿವೆ ಎಂದರು.

ವೇದಿಕೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಬಂಟ್ವಾಳ ಘಟಕದ ಅಧ್ಯಕ್ಷ ವಿಶ್ವನಾಥ ಬಂಟ್ವಾಳ, ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ. ಹರಿಪ್ರಸಾದ್ ಬಿ. ಶೆಟ್ಟಿ ಹಾಗೂ ಕನ್ನಡ ಬಳಗದ ಸಂಚಾಲಕಿ ಸಂಧ್ಯಾ ಉಪಸ್ಥಿತರಿದ್ದರು. ದೀಕ್ಷಿತಾ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *