ಸಿದ್ದಕಟ್ಟೆ: ಗ್ರಾಮೀಣ ಪ್ರದೇಶಗಳಲ್ಲಿ 9 ಮತ್ತು 11 ನಕ್ಷೆ ಅನುಮೋದನೆಗೆ ಸಂಬಂಧಿಸಿದಂತೆ ಫಲಾನುಭವಿಗಳು ಎದುರಿಸುತ್ತಿರುವ ಗೊಂದಲವನ್ನು ನಿವಾರಿಸಲು ಸ್ಪಷ್ಟ ನಿಯಮಾವಳಿಗಳನ್ನು ಶೀಘ್ರ ಜಾರಿಗೆ ತರಬೇಕು. ಜತೆಗೆ, ಕಟ್ಟಡ ಪರವಾನಗಿ ನೀಡುವ ಅಧಿಕಾರವನ್ನೂ ಗ್ರಾಮ ಪಂಚಾಯಿತಿಗಳಿಗೆ ಹಸ್ತಾಂತರಿಸಬೇಕು ಎಂದು ಮಾಜಿ ಬಂಟ್ವಾಳ ತಾಲೂಕು ಪಂಚಾಯಿತಿ ಸದಸ್ಯ ಪ್ರಭಾಕರ ಪ್ರಭು ಅವರು ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.

ಈ ಕುರಿತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಿಗೆ ಮನವಿ ಸಲ್ಲಿಸಿರುವ ಅವರು, 1,000 ಚದರ ಮೀಟರ್ವರೆಗಿನ ಜಮೀನಿನ ವಿನ್ಯಾಸ ಅನುಮೋದನೆಗೆ ಸಂಬಂಧಿಸಿದಂತೆ ನಗರ ಯೋಜನಾ ಪ್ರಾಧಿಕಾರಗಳಿಗೆ ಇದ್ದ ಅಧಿಕಾರವನ್ನು ಗ್ರಾಮ ಪಂಚಾಯಿತಿಗಳಿಗೆ ಹಸ್ತಾಂತರಿಸಿ ನಗರಾಭಿವೃದ್ಧಿ ಇಲಾಖೆಯು ಆದೇಶ ಹೊರಡಿಸಿದೆ. ಆದರೆ, ಆದೇಶ ಹೊರಬಿದ್ದು ಹಲವು ದಿನಗಳಾದರೂ ಪಂಚಾಯತ್ ರಾಜ್ ಇಲಾಖೆಯಿಂದ ಸ್ಪಷ್ಟ ನಿಯಮಾವಳಿಗಳು ಜಾರಿಯಾಗಿಲ್ಲ ಎಂದು ತಿಳಿಸಿದ್ದಾರೆ.

ಇದರಿಂದ ಗ್ರಾಮೀಣ ಪ್ರದೇಶದ ಜನರು ಸಂಕಷ್ಟ ಎದುರಿಸುವಂತಾಗಿದೆ. 1,000 ಚದರ ಮೀಟರ್ವರೆಗಿನ ಜಮೀನಿನ ವಿನ್ಯಾಸ ಅನುಮೋದನೆಗಾಗಿ ನಗರ ಯೋಜನಾ ಪ್ರಾಧಿಕಾರಗಳಲ್ಲಿ ಅರ್ಜಿ ಸ್ವೀಕರಿಸುತ್ತಿಲ್ಲ. ಮತ್ತೊಂದೆಡೆ, ಗ್ರಾಮ ಪಂಚಾಯಿತಿಗಳಲ್ಲಿಯೂ ಅರ್ಜಿಗಳನ್ನು ಸ್ವೀಕರಿಸುತ್ತಿಲ್ಲ. ಇದರಿಂದ ಫಲಾನುಭವಿಗಳು ಅತಂತ್ರ ಸ್ಥಿತಿಗೆ ಸಿಲುಕಿದ್ದು, ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳಲು ಸಾಧ್ಯವಾಗದೆ ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ತಕ್ಷಣವೇ ಅಗತ್ಯ ನಿಯಮಾವಳಿಗಳನ್ನು ಜಾರಿಗೊಳಿಸಿ ಜನಸಾಮಾನ್ಯರಿಗೆ ಅನುಕೂಲ ಕಲ್ಪಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

1,000 ಚದರ ಮೀಟರ್ವರೆಗಿನ ಜಮೀನಿನ ವಿನ್ಯಾಸ ಅನುಮೋದನೆ ಪಡೆದಿರುವ ಪ್ರಕರಣಗಳಲ್ಲಿ ಕಟ್ಟಡ ಪರವಾನಗಿ ನೀಡುವ ಅಧಿಕಾರವನ್ನೂ ಗ್ರಾಮ ಪಂಚಾಯಿತಿಗಳಿಗೆ ನೀಡಬೇಕು ಎಂದು ಪ್ರಭಾಕರ ಪ್ರಭು ಒತ್ತಾಯಿಸಿದ್ದಾರೆ.

ಪ್ರಸ್ತುತ ಗ್ರಾಮೀಣ ಭಾಗದ ಜನರು ಕಟ್ಟಡ ಪರವಾನಗಿ ಪಡೆಯಲು 25ರಿಂದ 30 ಕಿ.ಮೀ. ದೂರದಲ್ಲಿರುವ ನಗರ ಯೋಜನಾ ಪ್ರಾಧಿಕಾರಗಳಿಗೆ ಅಲೆದಾಡಬೇಕಾದ ಪರಿಸ್ಥಿತಿಯಿದೆ. ಕಟ್ಟಡ ಪರವಾನಗಿ ನೀಡುವ ಅಧಿಕಾರವನ್ನು ಗ್ರಾಮ ಪಂಚಾಯಿತಿಗಳಿಗೆ ಹಸ್ತಾಂತರಿಸಿದರೆ ಸಾವಿರಾರು ಜನರಿಗೆ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ತಕ್ಷಣ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಲ್ಲಿ ಪ್ರಭಾಕರ ಪ್ರಭು ಅವರು ಮನವಿ ಮಾಡಿದ್ದಾರೆ.


