ಬಂಟ್ವಾಳ: ಇರ್ವತ್ತೂರುಪದವು ಶ್ರೀ ಶಾರದೋತ್ಸವ ಸೇವಾ ಸಮಿತಿ, ಶ್ರೀ ಶಾರದ ಸೇವಾ ಟ್ರಸ್ಟ್ ಹಾಗೂ ದಶಮಾನೋತ್ಸವ ಸಮಿತಿಯ ಆಶ್ರಯದಲ್ಲಿ ಅಕ್ಟೋಬರ್ 18 ಮತ್ತು 19ರಂದು ಮೂಡುಪಡುಕೋಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ಶ್ರೀ ಶಾರದೋತ್ಸವದ ದಶಮಾನೋತ್ಸವ ‘ದಶಾರದ ಸಂಭ್ರಮ-2026’ ವೈಭವದಿಂದ ನಡೆಯಲಿದೆ.
ಈ ಕುರಿತು ಶ್ರೀ ಶಾರದ ಸೇವಾ ಟ್ರಸ್ಟ್ ಅಧ್ಯಕ್ಷ ಡಾ. ರಾಮಕೃಷ್ಣ ಎಸ್., ಶ್ರೀ ಶಾರದೋತ್ಸವ ಸೇವಾ ಸಮಿತಿ ಅಧ್ಯಕ್ಷ ಸುಧೀಂದ್ರ ಶೆಟ್ಟಿ ಎರ್ಮೆನಾಡು ಹಾಗೂ ದಶಮಾನೋತ್ಸವ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಆಲದಪದವು ಗೋಪಾಲ ಅಂಚನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅ.18ರಂದು ಧಾರ್ಮಿಕ ಸಭೆ, ಸಾಂಸ್ಕೃತಿಕ ಕಾರ್ಯಕ್ರಮ
ಅಕ್ಟೋಬರ್ 18ರಂದು ಬೆಳಿಗ್ಗೆ ಶ್ರೀ ಶಾರದಾ ದೇವಿಯ ಪ್ರತಿಷ್ಠೆ ನಡೆಯಲಿದ್ದು, ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ಜರುಗಲಿದೆ. ಮಧ್ಯಾಹ್ನ ಮಹಾಪೂಜೆ, ಭಕ್ತಿ ರಸಮಂಜರಿ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಬಳಿಕ ತೆಲಿಕೆದ ಗೊಂಚಿಲ್ ಹಾಸ್ಯ ಕಾರ್ಯಕ್ರಮ, ನೃತ್ಯ ವೈಭವ ಮತ್ತು ಭರತನಾಟ್ಯ ಪ್ರದರ್ಶನಗಳು ಪ್ರೇಕ್ಷಕರನ್ನು ರಂಜಿಸಲಿವೆ.
ಸಂಜೆ ಒಡಿಯೂರು ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಧಾರ್ಮಿಕ ಸಭೆ ನಡೆಯಲಿದೆ. ಈ ಸಂದರ್ಭದಲ್ಲಿ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ ಆಳ್ವ ಅವರಿಗೆ ಪ್ರತಿಷ್ಠಿತ ‘ಶ್ರೀ ಶಾರದ ತಿಲಕ ಪ್ರಶಸ್ತಿ’ ಪ್ರದಾನ ಮಾಡಲಾಗುವುದು. ಇದೇ ವೇಳೆ ‘ದಶಾರದ’ ಸ್ಮರಣ ಸಂಚಿಕೆ ಬಿಡುಗಡೆಗೊಳ್ಳಲಿದ್ದು, ರಾತ್ರಿ ತುಳು ನಾಟಕ ಪ್ರದರ್ಶನ ನಡೆಯಲಿದೆ.

ಅ.19ರಂದು ಮಕ್ಕಳ ಕುಣಿತ ಭಜನಾ ಸ್ಪರ್ಧೆ, ಶೋಭಾಯಾತ್ರೆ
ಅಕ್ಟೋಬರ್ 19ರಂದು ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ, ತಾಲೂಕು ಮಟ್ಟದ ಆಯ್ದ ತಂಡಗಳಿಂದ ಮಕ್ಕಳ ಕುಣಿತ ಭಜನಾ ಸ್ಪರ್ಧೆ, ನೃತ್ಯ ವೈಭವ ಹಾಗೂ ಮಹಾಪೂಜೆ ನಡೆಯಲಿದೆ. ಬಳಿಕ ಧಾರ್ಮಿಕ ಸಭೆ ಮತ್ತು ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ಜರುಗಲಿವೆ. ಸಂಜೆ ಶ್ರೀ ಶಾರದಾ ದೇವಿಯ ವೈಭವದ ಶೋಭಾಯಾತ್ರೆ ನಡೆಯಲಿದೆ.

ದಶಮಾನೋತ್ಸವದ ಅಂಗವಾಗಿ ಹಲವು ಕಾರ್ಯಕ್ರಮಗಳು
ದಶಮಾನೋತ್ಸವದ ಅಂಗವಾಗಿ ಈಗಾಗಲೇ ಬಂಟ್ವಾಳ ತಾಲೂಕು ಮಟ್ಟದ ವಿದ್ಯಾರ್ಥಿಗಳಿಗೆ ಹಾಗೂ ಮುಕ್ತ ವಿಭಾಗದಲ್ಲಿ ವಿವಿಧ ಸ್ಪರ್ಧೆಗಳನ್ನು ಒಳಗೊಂಡ ‘ದಶಾರದ ಸಾಂಸ್ಕೃತಿಕ ಸಂಭ್ರಮ’, ದಸರಾ ಕ್ರೀಡೋತ್ಸವ, ವಿವಿಧ ಕ್ಷೇತ್ರಗಳ ಸಾಧಕರಿಗೆ ‘ದಶಾರದ ಪುರಸ್ಕಾರ’, ಗುರುವಂದನೆ ಹಾಗೂ ವಿದ್ಯಾರ್ಥಿಗಳಿಗೆ ‘ಪ್ರತಿಭಾ ಪುರಸ್ಕಾರ’ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದಿವೆ.

ಇದೀಗ ಮುಖ್ಯ ದಶಮಾನೋತ್ಸವದ ಕಾರ್ಯಕ್ರಮಗಳಿಗೆ ವ್ಯಾಪಕ ಸಿದ್ಧತೆಗಳು ನಡೆಯುತ್ತಿವೆ. ಡಾ. ರಾಮಕೃಷ್ಣ ಎಸ್. ಅಧ್ಯಕ್ಷರಾಗಿರುವ ಶ್ರೀ ಶಾರದ ಸೇವಾ ಟ್ರಸ್ಟ್, ಸುಧೀಂದ್ರ ಶೆಟ್ಟಿ ಎರ್ಮೆನಾಡು ಅಧ್ಯಕ್ಷರಾಗಿರುವ ಶ್ರೀ ಶಾರದೋತ್ಸವ ಸೇವಾ ಸಮಿತಿ, ಸತೀಶ್ ಪೂಜಾರಿ ಬೆನಕ ಅಧ್ಯಕ್ಷರಾಗಿರುವ ದಶಮಾನೋತ್ಸವ ಸಮಿತಿ ಹಾಗೂ ಗೋಪಾಲ ಅಂಚನ್ ಅಧ್ಯಕ್ಷತೆಯ ದಶಮಾನೋತ್ಸವ ಸಾಂಸ್ಕೃತಿಕ ಸಮಿತಿ ಸೇರಿದಂತೆ ವಿವಿಧ ಪದಾಧಿಕಾರಿಗಳು ಮತ್ತು ನಿರ್ದೇಶಕರು ಕಾರ್ಯಕ್ರಮದ ಯಶಸ್ಸಿಗಾಗಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಸಮಾಜಮುಖಿ ಸೇವೆಯಲ್ಲಿ ಶಾರದೋತ್ಸವ ಸೇವಾ ಸಮಿತಿ
ಶ್ರೀ ಶಾರದೋತ್ಸವ ಸೇವಾ ಸಮಿತಿಯು ಕಳೆದ ಹತ್ತು ವರ್ಷಗಳ ಪಯಣದಲ್ಲಿ ಧಾರ್ಮಿಕ ಜಾಗೃತಿ, ಸಂಸ್ಕಾರ ಮತ್ತು ಸಂಸ್ಕೃತಿಯ ಉಳಿವು ಹಾಗೂ ಬೆಳವಣಿಗೆಯ ಜೊತೆಗೆ ಕಲೆ, ಸಾಹಿತ್ಯ, ಕ್ರೀಡೆ, ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಹಲವು ರಚನಾತ್ಮಕ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ.
ಕೊರೊನಾ ಸಂದರ್ಭದಲ್ಲಿ ಅರ್ಹ ಕುಟುಂಬಗಳಿಗೆ ರೇಷನ್ ಕಿಟ್ ವಿತರಣೆ, ಕೊರೊನಾ ವಾರಿಯರ್ಸ್ಗಳಿಗೆ ಸನ್ಮಾನ, ಉಚಿತ ಆರೋಗ್ಯ ಶಿಬಿರಗಳು, ಜೇನು ಸಾಕಾಣಿಕೆ ತರಬೇತಿ, ಪವರ್ಮ್ಯಾನ್ಗಳಿಗೆ ಗೌರವ, ಆಧಾರ್ ನೋಂದಣಿ ಶಿಬಿರ, ಅರ್ಹ ಕುಟುಂಬಗಳಿಗೆ ಮನೆ ನಿರ್ಮಾಣಕ್ಕೆ ಸಹಕಾರ, ಶಾಲೆಗೆ ಸ್ಟೀಲ್ ಕಪಾಟು ಕೊಡುಗೆ, ಕಾರ್ಮಿಕರ ನೋಂದಣಿ ಶಿಬಿರ, ಅನಾರೋಗ್ಯ ಪೀಡಿತರಿಗೆ ಆರ್ಥಿಕ ನೆರವು, ಉಚಿತ ಆಂಬ್ಯುಲೆನ್ಸ್ ಸೇವೆ ಹಾಗೂ ಕ್ಯಾನ್ಸರ್ ಜಾಗೃತಿ ಅಭಿಯಾನ ಸೇರಿದಂತೆ ಹಲವು ಸಮಾಜಮುಖಿ ಕಾರ್ಯಗಳನ್ನು ನಿರಂತರವಾಗಿ ನಡೆಸಲಾಗುತ್ತಿದೆ.

ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ‘ಪ್ರಧಾನ ಮಂತ್ರಿ ಟಿಬಿ ಮುಕ್ತ ಭಾರತ ಅಭಿಯಾನ್’ ಯೋಜನೆಯಡಿ ಸಮಿತಿಯನ್ನು ‘ನಿಕ್ಷಯ ಮಿತ್ರ’ ಎಂದು ಗುರುತಿಸಲಾಗಿದೆ. ಈ ಯೋಜನೆಯಡಿ ಪುಂಜಾಲಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಎಂಟು ಕ್ಷಯರೋಗಿಗಳಿಗೆ ಆರು ತಿಂಗಳ ಕಾಲ ಸುಮಾರು ₹60,000 ವೆಚ್ಚದಲ್ಲಿ ಪೌಷ್ಟಿಕ ಆಹಾರ ಒದಗಿಸಲಾಗುತ್ತಿದೆ.

ಮೂಡುಪಡುಕೋಡಿ ಸರ್ಕಾರಿ ಶಾಲೆಯ ಅಭಿವೃದ್ಧಿಗೆ ವಿಶೇಷ ಆದ್ಯತೆ
ಶ್ರೀ ಶಾರದ ಸೇವಾ ಟ್ರಸ್ಟ್ (ರಿ.), ಇರ್ವತ್ತೂರುಪದವು, ಮೂಡುಪಡುಕೋಡಿ ಉನ್ನತೀಕರಿಸಿದ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ದತ್ತು ಸ್ವೀಕರಿಸಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದೆ.
ಶಾಲೆಯ ಗೌರವ ಶಿಕ್ಷಕಿಗೆ ಮಾಸಿಕ ಗೌರವಧನ ಪಾವತಿ, ಚಿತ್ರಕಲೆ ಮತ್ತು ನೃತ್ಯ ಶಿಕ್ಷಕರ ನೇಮಕ, ಎಲ್ಕೆಜಿ ಹಾಗೂ ಯುಕೆಜಿ ಮಕ್ಕಳಿಗೆ ಮೊಟ್ಟೆ ಮತ್ತು ಬಾಳೆಹಣ್ಣು ವಿತರಣೆ, ವನಮಹೋತ್ಸವ, ಪರೀಕ್ಷಾ ತಯಾರಿ ಕಾರ್ಯಾಗಾರಗಳು, ವಿದ್ಯಾರ್ಥಿಗಳಿಗೆ ಬೇಸಿಗೆ ಶಿಬಿರಗಳು, ಶಾಲಾ ಪ್ರವೇಶೋತ್ಸವ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣೆಗಳನ್ನು ಆಯೋಜಿಸಲಾಗಿದೆ. ಅಲ್ಲದೆ, ₹25,000 ವೆಚ್ಚದಲ್ಲಿ ಕಂಪ್ಯೂಟರ್ ದುರಸ್ತಿ, ಕಂಪ್ಯೂಟರ್ ಶಿಕ್ಷಕರ ನೇಮಕ ಮತ್ತು ಶಾಲೆಯ ಗೋಡೆಗಳಿಗೆ ಅಕ್ರಿಲಿಕ್ ಚಿತ್ರಗಳ ಅಲಂಕಾರ ಸೇರಿದಂತೆ ಹಲವು ಕಾರ್ಯಗಳನ್ನು ಅನುಷ್ಠಾನಗೊಳಿಸಲಾಗಿದೆ.
ಮುಂದಿನ ಹಂತದಲ್ಲಿ ಶಾಲೆಗೆ ಒಳಾಂಗಣ ವೇದಿಕೆ ನಿರ್ಮಾಣ, ಸಭಾಂಗಣಕ್ಕೆ ಟೈಲ್ಸ್ ಅಳವಡಿಕೆ, ಶಾಲೆಯ ಮುಂಭಾಗದಲ್ಲಿ ಇಂಟರ್ಲಾಕ್ ಹಾಗೂ ಶೀಟ್ ಅಳವಡಿಕೆ ಮತ್ತು ತರಗತಿಗಳಿಗೆ ಸ್ಪೀಕರ್ ವ್ಯವಸ್ಥೆ ಕಲ್ಪಿಸುವ ಉದ್ದೇಶವಿದೆ. ಈ ಯೋಜನೆಗಳಿಗೆ ಸುಮಾರು ₹15 ಲಕ್ಷ ವೆಚ್ಚವಾಗುವ ನಿರೀಕ್ಷೆಯಿದ್ದು, ಯೋಜನೆಗಳ ಯಶಸ್ವಿ ಅನುಷ್ಠಾನಕ್ಕಾಗಿ ದಾನಿಗಳ ನೆರವನ್ನು ಟ್ರಸ್ಟ್ ನಿರೀಕ್ಷಿಸುತ್ತಿದೆ ಎಂದು ಟ್ರಸ್ಟ್ ಅಧ್ಯಕ್ಷ ಡಾ. ರಾಮಕೃಷ್ಣ ಎಸ್. ತಿಳಿಸಿದ್ದಾರೆ.


