ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಹಾಗೂ ಸಹಕಾರ ಮಹಾಮಂಡಳದ ಅಧ್ಯಕ್ಷ ಜಿ.ಟಿ. ದೇವೇಗೌಡ ಮತ್ತು ಅವರ ಧರ್ಮಪತ್ನಿ ಲಲಿತಾ ಜಿ.ಟಿ. ದೇವೇಗೌಡ ಅವರು ಆರ್ಟಿಐ ಮಾಹಿತಿ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು.

ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ ಶಾಸಕ ಜಿ.ಟಿ. ದೇವೇಗೌಡ, ಪತ್ರಿಕೆಯನ್ನು ದೇಶದ ಹಿತದೃಷ್ಟಿಯಿಂದ ಸದುಪಯೋಗಪಡಿಸಿಕೊಳ್ಳಬೇಕು. ಸಮಾಜದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಗಳನ್ನು ಗುರುತಿಸಿ, ಅವರ ಸಮಾಜಮುಖಿ ಕಾರ್ಯಗಳನ್ನು ಜನರಿಗೆ ಪರಿಚಯಿಸುವ ಕೆಲಸವನ್ನು ಪತ್ರಿಕೆ ಮಾಡಬೇಕು. ಆರ್ಟಿಐ ಮಾಹಿತಿ ಪತ್ರಿಕೆಯು ಉತ್ತಮವಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಲಲಿತಾ ಜಿ.ಟಿ. ದೇವೇಗೌಡ, ಪತ್ರಿಕೆಯು ಯಾವುದೇ ಅಡಚಣೆಗಳಿಲ್ಲದೆ ಸುಸೂತ್ರವಾಗಿ ಮುನ್ನಡೆಯಲಿ. ಸಮಾಜದಲ್ಲಿ ನಡೆಯುತ್ತಿರುವ ಉತ್ತಮ ಕಾರ್ಯಗಳು ಹಾಗೂ ಜನಪರ ಸೇವೆಗಳ ಕುರಿತು ಪತ್ರಿಕೆಯಲ್ಲಿ ಹೆಚ್ಚಿನ ಮಾಹಿತಿ ಪ್ರಕಟವಾಗಲಿ. ಪತ್ರಿಕೆಗೆ ನಮ್ಮ ಆಶೀರ್ವಾದ ಸದಾ ಇರಲಿದೆ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಆರ್ಟಿಐ ಮಾಹಿತಿ ಪತ್ರಿಕೆಯ ಸಹ ಸಂಪಾದಕ ಯಾದವ್ ಹರೀಶ್, ಏಳು ಜಿಲ್ಲೆಗಳ ಮುಖ್ಯಸ್ಥ ರಕ್ತದಾನಿ ಮಂಜು, ಮೈಸೂರು ಜಿಲ್ಲಾ ವರದಿಗಾರ ಝಾನ್ಸಿ ರಾಣಿ, ಟಿ. ನರಸೀಪುರ ವರದಿಗಾರ್ತಿ ಮಂಜುಳಾ, ಪತ್ರಿಕೆಯ ಸಲಹೆಗಾರ ಸತೀಶ್ ಹಾಗೂ ಪಿಜಿಆರ್ಎಸ್ಎಸ್ ಸಂಸ್ಥೆಯ ಖಜಾಂಚಿ ಮಂಜುಳಾ ಉಪಸ್ಥಿತರಿದ್ದರು.

ಸಮಾಜದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವವರ ಸಾಧನೆಗಳನ್ನು ಗುರುತಿಸಿ, ಅವರ ಜನಪರ ಕಾರ್ಯಗಳನ್ನು ಜನರಿಗೆ ತಲುಪಿಸುವಲ್ಲಿ ಆರ್ಟಿಐ ಮಾಹಿತಿ ಪತ್ರಿಕೆ ಪರಿಣಾಮಕಾರಿ ವೇದಿಕೆಯಾಗಲಿ ಎಂಬ ಆಶಯವನ್ನು ಗಣ್ಯರು ವ್ಯಕ್ತಪಡಿಸಿದರು.


