Breaking
1 Jul 2026, Wed

ವಾಣಿಜ್ಯ ಎಲ್ ಪಿಜಿ ದರದಲ್ಲಿ ₹183.50 ಇಳಿಕೆ; ಇಂದಿನಿಂದ ಹೊಸ ದರ ಜಾರಿ

ನವದೆಹಲಿ: ವಾಣಿಜ್ಯ ಬಳಕೆಯ ಎಲ್ ಪಿಜಿ (LPG) ಪೂರೈಕೆಯ ಮೇಲಿನ ನಿರ್ಬಂಧ ತೆರವುಗೊಂಡ ಬೆನ್ನಲ್ಲೇ ಕೇಂದ್ರ ಸರ್ಕಾರ ಮತ್ತೊಂದು ಸಿಹಿಸುದ್ದಿ ನೀಡಿದೆ. ಇಂದಿನಿಂದ (ಜುಲೈ 1) ಜಾರಿಗೆ ಬರುವಂತೆ 19 ಕೆ.ಜಿ. ವಾಣಿಜ್ಯ ಬಳಕೆಯ ಎಲ್ ಪಿಜಿ ಸಿಲಿಂಡರ್ ದರವನ್ನು ₹183.50 ಇಳಿಕೆ ಮಾಡಲಾಗಿದೆ.


ದರ ಇಳಿಕೆಯೊಂದಿಗೆ ಇದುವರೆಗೆ ₹3,113.50 ಇದ್ದ 19 ಕೆ.ಜಿ. ವಾಣಿಜ್ಯ ಸಿಲಿಂಡರ್ ಬೆಲೆ ₹2,930ಕ್ಕೆ ಇಳಿದಿದೆ. ಆದರೆ 14.2 ಕೆ.ಜಿ. ಗೃಹಬಳಕೆಯ ಎಲ್ ಪಿಜಿ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದು ತೈಲ ಕಂಪನಿಗಳು ಸ್ಪಷ್ಟಪಡಿಸಿವೆ.


ಇತ್ತೀಚೆಗೆ ಮಧ್ಯಪ್ರಾಚ್ಯದಲ್ಲಿ ಉಂಟಾದ ಉದ್ವಿಗ್ನ ಪರಿಸ್ಥಿತಿ ಹಾಗೂ ಇಂಧನ ಪೂರೈಕೆಯ ವ್ಯತ್ಯಯದಿಂದ ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ಮತ್ತು ಎಲ್ ಪಿಜಿ ಬೆಲೆಗಳು ಏರಿಕೆಯಾಗಿದ್ದವು. ಇದರ ಪರಿಣಾಮವಾಗಿ ಭಾರತದಲ್ಲಿಯೂ ವಾಣಿಜ್ಯ ಎಲ್ಪಿಜಿ ದರವನ್ನು ಹಲವು ಹಂತಗಳಲ್ಲಿ ಹೆಚ್ಚಿಸಲಾಗಿತ್ತು.


ಮಾರ್ಚ್ನಲ್ಲಿ ₹144, ಏಪ್ರಿಲ್ನಲ್ಲಿ ₹195.50, ಮೇ ನಲ್ಲಿ ₹993 ಹಾಗೂ ಜೂನ್ ನಲ್ಲಿ ₹42 ಹೆಚ್ಚಳವಾಗಿದ್ದು, ಒಟ್ಟು ನಾಲ್ಕು ಹಂತಗಳಲ್ಲಿ ₹1,374.50 ಏರಿಕೆಯಾಗಿತ್ತು. ಇದೀಗ ₹183.50 ಇಳಿಕೆ ಮೂಲಕ ವಾಣಿಜ್ಯ ಬಳಕೆದಾರರಿಗೆ ಸ್ವಲ್ಪ ಮಟ್ಟಿನ ನಿರಾಳತೆ ಸಿಕ್ಕಂತಾಗಿದೆ.


ಇದೇ ಅವಧಿಯಲ್ಲಿ ಗೃಹಬಳಕೆಯ ಎಲ್ ಪಿಜಿ ಸಿಲಿಂಡರ್ ದರವೂ ಎರಡು ಬಾರಿ ಏರಿಕೆಯಾಗಿತ್ತು. ಮಾರ್ಚ್ನಲ್ಲಿ ₹60 ಹಾಗೂ ಜೂನ್ನಲ್ಲಿ ₹29 ಹೆಚ್ಚಳವಾಗಿದ್ದು, ಒಟ್ಟು ₹89 ಏರಿಕೆಯಾಗಿದೆ. ಆದರೆ ಈ ಬಾರಿ ಗೃಹಬಳಕೆಯ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.

Leave a Reply

Your email address will not be published. Required fields are marked *