Breaking
1 Jul 2026, Wed

ಬಿಜೆಪಿ ಎಸ್ಸಿ ಮೋರ್ಚಾ ಸಭೆ; ಸಂಘಟನೆ ಬಲವರ್ಧನೆಗೆ ಕರೆ

ಬಂಟ್ವಾಳ: ಭಾರತೀಯ ಜನತಾ ಪಾರ್ಟಿ ಬಂಟ್ವಾಳ ಮಂಡಲದ ಎಸ್ಸಿ ಮೋರ್ಚಾದ ಪದಾಧಿಕಾರಿಗಳ ಸಭೆಯು ಬಿ.ಸಿ.ರೋಡಿನ ಬಿಜೆಪಿ ಪಕ್ಷದ ಕಚೇರಿಯಲ್ಲಿ ಎಸ್ಸಿ ಮೋರ್ಚಾ ಅಧ್ಯಕ್ಷ ರಮೇಶ್ ಕುದ್ರೆಬೆಟ್ಟು ಅವರ ಅಧ್ಯಕ್ಷತೆಯಲ್ಲಿ ನಡೆಯಿತು.


ಸಭೆಯನ್ನುದ್ದೇಶಿಸಿ ಮಾತನಾಡಿದ ರಮೇಶ್ ಕುದ್ರೆಬೆಟ್ಟು, ಪರಿಶಿಷ್ಟ ಜಾತಿ ಸಮುದಾಯದವರು ವಿರೋಧ ಪಕ್ಷಗಳ ಅಪಪ್ರಚಾರಗಳಿಗೆ ಕಿವಿಗೊಡದೆ ಪಕ್ಷದೊಂದಿಗೆ ಗುರುತಿಸಿಕೊಂಡು ಸಂಘಟನಾತ್ಮಕವಾಗಿ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು. ಸರ್ಕಾರದ ವಿವಿಧ ಯೋಜನೆಗಳ ಸವಲತ್ತುಗಳನ್ನು ಅರ್ಹ ಫಲಾನುಭವಿಗಳ ಮನೆಬಾಗಿಲಿಗೆ ತಲುಪಿಸುವ ಕಾರ್ಯಕ್ಕೆ ಆದ್ಯತೆ ನೀಡಬೇಕು ಎಂದರು.


ಬಿಜೆಪಿ ಬಂಟ್ವಾಳ ಮಂಡಲ ಅಧ್ಯಕ್ಷ ಆರ್. ಚೆನ್ನಪ್ಪ ಕೋಟ್ಯಾನ್ ಮಾತನಾಡಿ, ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮೋರ್ಚಾ ಕಾರ್ಯಕರ್ತರು ತಮ್ಮ ವ್ಯಾಪ್ತಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಕಾರ್ಯ ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.


ಜಿಲ್ಲಾ ಕಾರ್ಯದರ್ಶಿ ದಿನೇಶ್ ಅಮ್ಟೂರು ಮಾತನಾಡಿ, ತಮ್ಮ ಜಾತಿಯ ಬಗ್ಗೆ ಗೌರವ ಹೊಂದಿ ಪಕ್ಷದ ಕಾರ್ಯಗಳನ್ನು ನಿಷ್ಠೆಯಿಂದ ನಿರ್ವಹಿಸಬೇಕು ಎಂದರು.
ಮಂಡಲ ಕಾರ್ಯದರ್ಶಿ ಹಾಗೂ ಎಸ್ಸಿ ಮೋರ್ಚಾ ಪ್ರಭಾರಿ ಹಿರಣ್ಮಯಿ ಕಲ್ಲಡ್ಕ ಮಾತನಾಡಿ, ನೀಡಲಾದ ಜವಾಬ್ದಾರಿಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸುವ ಮೂಲಕ ಬಂಟ್ವಾಳದಲ್ಲಿ ಎಸ್ಸಿ ಮೋರ್ಚಾವನ್ನು ಮತ್ತಷ್ಟು ಬಲಿಷ್ಠಗೊಳಿಸಬೇಕು ಎಂದು ಕರೆ ನೀಡಿದರು.


ವೇದಿಕೆಯಲ್ಲಿ ಆರ್. ಚೆನ್ನಪ್ಪ ಕೋಟ್ಯಾನ್, ರಮೇಶ್ ಕುದ್ರೆಬೆಟ್ಟು, ದಿನೇಶ್ ಅಮ್ಟೂರು, ಹಿರಣ್ಮಯಿ ಕಲ್ಲಡ್ಕ ಹಾಗೂ ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಗೋಪಾಲ ಕಾರಗುಡ್ಡೆ ಉಪಸ್ಥಿತರಿದ್ದರು.
ಸಭೆಯಲ್ಲಿ ಎಸ್ಸಿ ಮೋರ್ಚಾದ ಮಂಡಲ ಪದಾಧಿಕಾರಿಗಳು, ಸದಸ್ಯರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು. ಗೋಪಾಲ ಕಾರಗುಡ್ಡೆ ಸ್ವಾಗತಿಸಿ ವಂದಿಸಿದರು.

Leave a Reply

Your email address will not be published. Required fields are marked *