Breaking
22 Aug 2026, Sat

ಅಮಳಿಲ್ಲದ ಜೀವನ ಬಾಳೊಂದು ನಂದನ – ಆನಂದ ಸುವರ್ಣ

ವಾಮದಪದವು: ದೃಢವಾದ ನಿರ್ಧಾರವಿದ್ದರೆ ಯಾರಿಂದಲೂ ನಮ್ಮನ್ನು ತಪ್ಪು ದಾರಿಗೆ ಎಳೆಯಲು ಸಾಧ್ಯವಿಲ್ಲ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕರಾವಳಿ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಆನಂದ ಸುವರ್ಣ ಹೇಳಿದರು.

ಅವರು ಜೂನ್ 29ರಂದು ವಾಮದಪದವು ಬಸ್ತಿಕೋಡಿ ಶ್ರೀ ಪದ್ಮಾವತಿ ಅಮ್ಮ ಸಭಾಭವನದಲ್ಲಿ ನಡೆಯುತ್ತಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ 2076ನೇ ಮದ್ಯವರ್ಜನ ಶಿಬಿರದ ನಾಲ್ಕನೇ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಜೀವನ ಎನ್ನುವುದು ದೇವರಿಂದ ಕೊಡಲ್ಪಡುವ ಬಹುದೊಡ್ಡ ಅವಕಾಶ. ಭೂಮಿಯ ಮೇಲಿರುವ ಸಕಲ ಜೀವರಾಶಿಗಳಲ್ಲಿ ಶ್ರೇಷ್ಠ ಯಾರೆಂದರೆ ಅದು ಮನುಷ್ಯ. ಆದರೆ ಅತೀ ಹೆಚ್ಚು ತಪ್ಪು ಮಾಡುವವರು ಯಾರೆಂದರೆ ಅದು ಕೂಡಾ ಮನುಷ್ಯರೆ. ನಮ್ಮನ್ನು ನಾವು ತಿಳಿದುಕೊಂಡು, ನಮ್ಮ ಜವಾಬ್ದಾರಿ ಏನೆಂಬುದನ್ನು ಅರಿತು ಜೀವಿಸಿದರೆ ಜೀವನಕ್ಕೆ ಅರ್ಥ ಬರಬಹುದು. ಇಲ್ಲದಿದ್ದರೆ ಜೀವನ ವ್ಯರ್ಥ ಎಂದು ಅವರು ಅಭಿಪ್ರಾಯಪಟ್ಟರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನಡೆಯುತ್ತಿರುವ ಮದ್ಯವರ್ಜನ ಶಿಬಿರವು ಅರ್ಥಪೂರ್ಣ ಕಾರ್ಯಕ್ರಮವಾಗಿದ್ದು, ಶಿಬಿರಾರ್ಥಿಗಳು ಇದರ ಸದುಪಯೋಗ ಪಡೆದು ಭವಿಷ್ಯದಲ್ಲಿ ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಈ ಶಿಬಿರದಲ್ಲಿ ಒಟ್ಟು 67 ಮಂದಿ ಶಿಬಿರಾರ್ಥಿಗಳು ಭಾಗವಹಿಸಿದ್ದರು. ಸಭಾ ವೇದಿಕೆಯಲ್ಲಿ ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ, ಗೌರವಾಧ್ಯಕ್ಷ ಹರೀಂದ್ರ ಪೈ, ತಾಲೂಕು ಯೋಜನಾಧಿಕಾರಿ ಜಯಾನಂದ ಹಾಗೂ ಸಮಿತಿಯ ಉಪಾಧ್ಯಕ್ಷ ಪ್ರವೀಣ್ ಕಾಡಬೆಟ್ಟು ಉಪಸ್ಥಿತರಿದ್ದರು. ಶಿಬಿರಾಧಿಕಾರಿ ರಮೇಶ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *