ಬಂಟ್ವಾಳ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕೋದ್ಯಮವು ಜನಾಭಿಪ್ರಾಯಕ್ಕೆ ಅನುಗುಣವಾಗಿ ಸರ್ಕಾರ ಕಾರ್ಯನಿರ್ವಹಿಸುವಂತೆ ಮಾಡುವ ಪ್ರಮುಖ ಮಾಧ್ಯಮವಾಗಿದೆ. ಸರ್ಕಾರದ ಕಾನೂನು ಹಾಗೂ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಪತ್ರಿಕೆಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ಬಂಟ್ವಾಳ ಎಸ್.ವಿ.ಎಸ್ ದೇವಳ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ.ಎನ್. ಗಂಗಾಧರ ಆಳ್ವ ಹೇಳಿದರು.

ಕಾಲೇಜಿನ ಕನ್ನಡ ಸಂಘದ ವತಿಯಿಂದ ಆಯೋಜಿಸಲಾದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಕಳೆದ 40 ವರ್ಷಗಳಿಂದ ಪತ್ರಿಕಾ ವಿತರಕರಾಗಿ ಸೇವೆ ಸಲ್ಲಿಸುತ್ತಿರುವ ಬಿ.ಸಿ.ರೋಡಿನ ಮಾಧವರನ್ನು ಸನ್ಮಾನಿಸಿ ಅವರು ಮಾತನಾಡಿದರು.

ಸತ್ಯವನ್ನು ಜನರಿಗೆ ತಲುಪಿಸಿ, ಅನ್ಯಾಯವನ್ನು ಪ್ರಶ್ನಿಸುವ ಮೂಲಕ ಪತ್ರಿಕೆಗಳು ತಮ್ಮ ಪತ್ರಿಕಾಧರ್ಮವನ್ನು ಪಾಲಿಸಬೇಕು. ಭ್ರಷ್ಟಾಚಾರ ನಿರ್ಮೂಲನೆಗೆ ಪತ್ರಿಕಾ ಮಾಧ್ಯಮವು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಹಿರಿಯ ಪತ್ರಕರ್ತ ಜಯಾನಂದ ಪೆರಾಜೆ ಅವರು ಪತ್ರಿಕಾ ದಿನಾಚರಣೆಯ ಮಹತ್ವ ಹಾಗೂ ಮಂಗಳೂರು ಸಮಾಚಾರ ಪತ್ರಿಕೆಯಿಂದ ಆರಂಭಗೊಂಡು ಕರ್ನಾಟಕದಲ್ಲಿ ಪತ್ರಿಕೋದ್ಯಮದ ಬೆಳವಣಿಗೆಯ ಕುರಿತು ಉಪನ್ಯಾಸ ನೀಡಿದರು.

ಪತ್ರಿಕಾ ವಿತರಕರು ಪ್ರತಿದಿನ ಮುಂಜಾನೆ ಮನೆ ಬಾಗಿಲಿಗೆ ಪತ್ರಿಕೆ ತಲುಪಿಸುವ ಮೂಲಕ ಸಮಾಜಕ್ಕೆ ಮಾಹಿತಿಯನ್ನು ತಲುಪಿಸುತ್ತಾರೆ. ಪತ್ರಿಕೋದ್ಯಮದ ಬೆಳವಣಿಗೆಯಲ್ಲಿ ಪತ್ರಕರ್ತರು ಹಾಗೂ ಪತ್ರಿಕಾ ಏಜೆಂಟರ ಪಾತ್ರ ಮಹತ್ತರವಾಗಿದೆ ಎಂದು ಅವರು ಹೇಳಿದರು. ಜೊತೆಗೆ ವಿದ್ಯಾರ್ಥಿಗಳು ಪತ್ರಿಕೆ ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.



