ಬಂಟ್ವಾಳ: ತಾಲ್ಲೂಕಿನ ನರಿಕೊಂಬು ಪ್ರದೇಶದಲ್ಲಿ ನಿರ್ಮಾಣಗೊಳ್ಳುತ್ತಿರುವ ಅಂಧ ಕಲಾವಿದರ ಮನೆಗೆ ಲೊರೆಟ್ಟೋ ಹಿಲ್ಸ್ ರೋಟರಿ ಕ್ಲಬ್ ವತಿಯಿಂದ ರೂ 1ಲಕ್ಷ ಮೊತ್ತದ ದೇಣಿಗೆಯನ್ನು ಬಂಟ್ವಾಳ ರೋಟರಿ ಕ್ಲಬ್ಬಿನ ಅಧ್ಯಕ್ಷ ಬಸ್ತಿ ಮಾಧವ ಶೆಣೈ ಇವರಿಗೆ ಹಸ್ತಾಂತರಿಸಲಾಯಿತು.

ಕಳೆದ ಎಂಟು ವರ್ಷಗಳ ಹಿಂದೆ ಸ್ಥಾಪಕಾಧ್ಯಕ್ಷ ಅವಿಲ್ ಮಿನೇಜಸ್ ನೇತೃತ್ವದಲ್ಲಿ ಆರಂಭಗೊಂಡ ಬಂಟ್ವಾಳ ಲೊರೆಟ್ಟೋ ಹಿಲ್ಸ್ ರೋಟರಿ ಕ್ಲಬ್‌ಗೆ 2025-26ನೇ ಸಾಲಿನಲ್ಲಿ ರೂ 30 ಲಕ್ಷ ವೆಚ್ಚದಲ್ಲಿ ನಡೆಸಲಾದ ವಿವಿಧ ಸಮಾಜಮುಖಿ ಸೇವಾ ಚಟುವಟಿಕೆಗಳು ಹಾಗೂ ಕ್ಲಬ್‌ನ ಸಾಧನೆಯನ್ನು ಪರಿಗಣಿಸಿ ರೋಟರಿ ಜಿಲ್ಲೆ 3181ರಲ್ಲಿ ಪ್ರತಿಷ್ಠಿತ ‘ಡೈಮಂಡ್ ಪ್ಲಸ್’ ಪ್ರಶಸ್ತಿ ಲಭಿಸಿದೆ ಎಂದು ಕ್ಲಬ್ ಅಧ್ಯಕ್ಷ ವಿಜಯ ಫೆರ್ನಾಂಡಿಸ್ ಲೊರೆಟ್ಟೋ ತಿಳಿಸಿದ್ದಾರೆ.

ಬಿ.ಸಿ.ರೋಡಿನಲ್ಲಿ ಜು.2ರ ಗುರುವಾರ ಸಂಜೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಒಟ್ಟು 55 ಸದಸ್ಯರನ್ನು ಹೊಂದಿರುವ ಕ್ಲಬ್, ಬಂಟ್ವಾಳ ರೋಟರಿ ಕ್ಲಬ್ ನೇತೃತ್ವದಲ್ಲಿ ನರಿಕೊಂಬು ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಅಂಧ ಕಲಾವಿದರ ಮನೆಗೆ ರೂ.1 ಲಕ್ಷ ದೇಣಿಗೆ ನೀಡಿದೆ. ಪ್ರತೀ ವರ್ಷ ಪಲ್ಸ್ ಪೋಲಿಯೋ ಸಹಿತ ರೋಟರಿ ದತ್ತಿ ನಿಧಿಗೆ ಸದಸ್ಯರು ಗರಿಷ್ಟ ಮೊತ್ತದ ದೇಣಿಗೆ ನೀಡುತ್ತಿದ್ದು, ಇದೇ ವೇಳೆ ಲೊರೆಟ್ಟೋದಲ್ಲಿ ರೂ.1.50 ಲಕ್ಷ ವೆಚ್ಚದಲ್ಲಿ ಉಚಿತ ಬಸ್ ತಂಗುದಾಣ ಹಾಗೂ ಆರಂಬೋಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರೂ.4.50 ಲಕ್ಷ ವೆಚ್ಚದ ರಂಗಮಂದಿರ ನಿರ್ಮಿಸಿ ಸಾರ್ವಜನಿಕ ಬಳಕೆಗೆ ಸಮರ್ಪಿಸಲಾಗಿದೆ ಎಂದರು.

ಅನಾರೋಗ್ಯಪೀಡಿತರ ಚಿಕಿತ್ಸೆಗೆ ಆರ್ಥಿಕ ನೆರವು, ಶಾಲೆಗಳಿಗೆ ಪುಸ್ತಕ, ಬ್ಯಾಗ್, ಕೊಡೆ, ಸ್ಕೌಟ್-ಗೈಡ್ಸ್ ಉಡುಪು, ಕಪಾಟು, ಧ್ವನಿವರ್ಧಕ, ಹಣ್ಣಿನ ಗಿಡ ಹಾಗೂ ಕುಡಿಯುವ ನೀರಿನ ಶುದ್ಧೀಕರಣ ಘಟಕಗಳ ವಿತರಣೆ ಸೇರಿದಂತೆ ಹಲವು ಸೇವಾ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ. ಅಂಗನವಾಡಿ ಕೇಂದ್ರಗಳಿಗೆ ಧ್ವಜಸ್ತಂಭ, ಕಪಾಟು, ಪೋಡಿಯಂ ಹಾಗೂ ಇಂಟರ್‌ಲಾಕ್ ಅಳವಡಿಸುವ ಕಾರ್ಯವೂ ನಡೆದಿದೆ ಎಂದು ವಿವರಿಸಿದರು.

ಜಿಲ್ಲಾ ಮಟ್ಟದ ಚೆಸ್ ಪಂದ್ಯಾವಳಿ, ರಸ್ತೆ ಸುರಕ್ಷತೆ ಕುರಿತು ಚಿತ್ರಕಲಾ ಸ್ಪರ್ಧೆ, ರಾಷ್ಟ್ರೀಯ ಏಕತಾ ದಿವಸ್ ಓಟ, ಮಾದಕ ವ್ಯಸನ ವಿರೋಧಿ ಜಾಗೃತಿ ಶಿಬಿರ, ಎ.ಜೆ. ಆಸ್ಪತ್ರೆ ಸಹಯೋಗದಲ್ಲಿ ಹೃದಯಾಘಾತ ತಡೆ, ಸಿಪಿಆರ್ ಹಾಗೂ ಪ್ರಥಮ ಚಿಕಿತ್ಸೆ ಕುರಿತ ತರಬೇತಿ ಕಾರ್ಯಕ್ರಮಗಳು, ಬೃಹತ್ ರಕ್ತದಾನ ಮತ್ತು ವೈದ್ಯಕೀಯ ತಪಾಸಣಾ ಶಿಬಿರ, ಶೈಕ್ಷಣಿಕ ಹಾಗೂ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.

ಇದರ ಜೊತೆಗೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾಮಟ್ಟದ ‘ರೋಟರಿ ಕಂಬಳ’ ಆಯೋಜನೆ ಹಾಗೂ ಪಾಳುಬಿದ್ದ 10 ಎಕರೆ ಗದ್ದೆಯಲ್ಲಿ ಭತ್ತದ ಕೃಷಿ ನಡೆಸುವ ಮೂಲಕ ಗಮನ ಸೆಳೆಯಲಾಗಿದೆ. ಕಳೆದ ಎಂಟು ವರ್ಷಗಳಲ್ಲಿ ಸುಮಾರು ರೂ.2 ಕೋಟಿಗೂ ಅಧಿಕ ಮೊತ್ತದ ಸಮಾಜಮುಖಿ ಸೇವಾ ಚಟುವಟಿಕೆಗಳನ್ನು ನಡೆಸಲಾಗಿದ್ದು, ಸತತ ಎರಡನೇ ಬಾರಿಗೆ ‘ಡೈಮಂಡ್ ಪ್ಲಸ್’ ಪ್ರಶಸ್ತಿ ಲಭಿಸಿರುವುದು ಹೆಮ್ಮೆಯ ಸಂಗತಿ ಎಂದು ತಿಳಿಸಿದರು.

ಜು.5ರಂದು ಪದಗ್ರಹಣ:
ಕ್ಲಬ್‌ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಜು.5ರಂದು ಸಂಜೆ 6.30ಕ್ಕೆ ಕ್ಲಬ್ ಸಭಾಂಗಣದಲ್ಲಿ ನಡೆಯಲಿದೆ ಎಂದು ನಿಯೋಜಿತ ಅಧ್ಯಕ್ಷೆ ಗೀತಾ ಪಿ. ಬಲ್ಲಾಳ್ ಮಾವಂತೂರು ತಿಳಿಸಿದರು. ಮಾಜಿ ಜಿಲ್ಲಾ ಗವರ್ನರ್ ಡಾ. ಕೆ. ರವಿ ಅಪ್ಪಾಜಿ ಪದಗ್ರಹಣ ನೆರವೇರಿಸಲಿದ್ದು, ಮಾಜಿ ಜಿಲ್ಲಾ ಗವರ್ನರ್ ಎನ್. ಪ್ರಕಾಶ್ ಕಾರಂತ್, ಸಹಾಯಕ ಗವರ್ನರ್ ಶ್ರುತಿ ಮಾಡ್ತಾ, ವಲಯ ಸೇನಾನಿ ಗಣೇಶ್ ಶೆಟ್ಟಿ ಗೋಳ್ತಮಜಲು, ಸ್ಥಾಪಕಾಧ್ಯಕ್ಷ ಅವಿಲ್ ಮಿನೇಜಸ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ವಲಯ ಸೇನಾನಿ ರಾಮಚಂದ್ರ ಶೆಟ್ಟಿಗಾರ್ ಅಣ್ಣಳಿಕೆ, ಕಾರ್ಯದರ್ಶಿ ಮೋಹನ್ ಕೆ. ಶ್ರೀಯಾನ್ ರಾಯಿ ಹಾಗೂ ನಿಯೋಜಿತ ಕಾರ್ಯದರ್ಶಿ ರೂಪಾ ರಾಜೇಶ್ ಶೆಟ್ಟಿ ಸೀತಾಳ ಉಪಸ್ಥಿತರಿದ್ದರು.






