ಬೆಂಗಳೂರು: ನಗರದ ಕೆಆರ್ ಸರ್ಕಲ್ನಲ್ಲಿ ಶನಿವಾರ (ಜು. 4) ಬೆಳಿಗ್ಗೆ ಲಾರಿ ಮತ್ತು ಎರಡು ಬಿಎಂಟಿಸಿ ಬಸ್ ಗಳ ನಡುವೆ ಸಂಭವಿಸಿದ ಭೀಕರ ಸರಣಿ ಅಪಘಾತದಲ್ಲಿ ಬಸ್ ಚಾಲಕ ಸೇರಿದಂತೆ 13ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ.

ಸಿಗ್ನಲ್ನಲ್ಲಿ ನಿಂತಿದ್ದ ಬಿಎಂಟಿಸಿ ಬಸ್ಗೆ ಹಿಂದಿನಿಂದ ಬಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ, ಮುಂದೆ ನಿಂತಿದ್ದ ಮತ್ತೊಂದು ಬಸ್ಸಿಗೂ ಡಿಕ್ಕಿ ಸಂಭವಿಸಿದೆ. ಅಪಘಾತದ ತೀವ್ರತೆಗೆ ಎರಡೂ ಬಸ್ ಗಳು ನಜ್ಜುಗುಜ್ಜಾಗಿದ್ದು, ಕ್ರೇನ್ ಗಳ ಮೂಲಕ ಅವುಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸಲಾಯಿತು.

ಅಪಘಾತದಲ್ಲಿ ಬಸ್ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ. ಡಿಕ್ಕಿಯ ರಭಸಕ್ಕೆ ಚಾಲಕನ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಮಹಿಳೆಯ ಕಾಲು ಬಸ್ನಲ್ಲಿ ಸಿಲುಕಿಕೊಂಡಿತ್ತು. ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯರು ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಹಾರೆ ಮತ್ತು ಕೋಲುಗಳ ಸಹಾಯದಿಂದ ಕಾರ್ಯಾಚರಣೆ ನಡೆಸಿ ಮಹಿಳೆಯನ್ನು ಸುರಕ್ಷಿತವಾಗಿ ಹೊರತೆಗೆದರು.

ಗಾಯಗೊಂಡ 13 ಪ್ರಯಾಣಿಕರನ್ನು ಚಿಕಿತ್ಸೆಗಾಗಿ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಕಾಲು ಸಿಲುಕಿಕೊಂಡಿದ್ದ ಮಹಿಳೆಯನ್ನು ಅಂಬುಲೆನ್ಸ್ ಮೂಲಕ ಮಾರ್ಥಾಸ್ ಆಸ್ಪತ್ರೆಗೆ ರವಾನಿಸಲಾಗಿದೆ.

ಅಪಘಾತದ ಪರಿಣಾಮ ಕೆಆರ್ ಸರ್ಕಲ್ ಪ್ರದೇಶದಲ್ಲಿ ಕೆಲಕಾಲ ಭಾರೀ ಸಂಚಾರ ದಟ್ಟಣೆ ಉಂಟಾಗಿ ವಾಹನ ಸವಾರರು ಪರದಾಡಿದರು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಪಘಾತದ ಕುರಿತು ತನಿಖೆ ಕೈಗೊಂಡಿದ್ದಾರೆ.


