Breaking
6 Jul 2026, Mon

ಪೊಳಲಿಯಲ್ಲಿ ಬಿಜೆಪಿ SIR ಸಂಘಟನಾ ಸಭೆ: ಅರ್ಹ ಮತದಾರರ ಹೆಸರು ಪಟ್ಟಿಯಲ್ಲಿ ಖಚಿತಪಡಿಸಲು ಶಾಸಕ ರಾಜೇಶ್ ನಾಯ್ಕ್ ಕರೆ

ಬಂಟ್ವಾಳ: ಭಾರತೀಯ ಜನತಾ ಪಾರ್ಟಿ ವತಿಯಿಂದ ಕರಿಯಂಗಳ, ಅಮ್ಮುಂಜೆ, ತೆಂಕಬೆಳ್ಳೂರ್ ಹಾಗೂ ಬಡಗಬೆಳ್ಳೂರ್ ಗ್ರಾಮಗಳ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಸಂಘಟನಾತ್ಮಕ ಸಭೆಯು ಪೊಳಲಿಯ ಸರ್ವಮಂಗಳ ಸಭಾಂಗಣದಲ್ಲಿ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ನೇತೃತ್ವದಲ್ಲಿ ನಡೆಯಿತು.

ಸಭೆಗೆ ಮುನ್ನ ಭಾರತೀಯ ಜನಸಂಘದ ಸಂಸ್ಥಾಪಕ, ಪ್ರಖರ ರಾಷ್ಟ್ರೀಯವಾದಿ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ ಜನ್ಮದಿನದ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಗೌರವ ನಮನ ಸಲ್ಲಿಸಲಾಯಿತು. ಈ ವೇಳೆ ಅವರ ರಾಷ್ಟ್ರಭಕ್ತಿ, ದೂರದೃಷ್ಟಿ ಹಾಗೂ ದೇಶಕ್ಕಾಗಿ ನೀಡಿದ ಕೊಡುಗೆಯನ್ನು ಸ್ಮರಿಸಲಾಯಿತು.

ಬಳಿಕ ನಡೆದ ಸಭೆಯಲ್ಲಿ ಮಾತನಾಡಿದ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಪ್ರಕ್ರಿಯೆಯು ಪ್ರಜಾಪ್ರಭುತ್ವವನ್ನು ಮತ್ತಷ್ಟು ಬಲಪಡಿಸುವ ಮಹತ್ವದ ಕಾರ್ಯವಾಗಿದ್ದು, ಪ್ರತಿಯೊಬ್ಬ ಅರ್ಹ ಮತದಾರರ ಹೆಸರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿರುವುದನ್ನು ಖಚಿತಪಡಿಸುವ ಜವಾಬ್ದಾರಿ ಬೂತ್ ಮಟ್ಟದ ಕಾರ್ಯಕರ್ತರ ಮೇಲಿದೆ ಎಂದು ಹೇಳಿದರು.

ಬೂತ್ ಅಧ್ಯಕ್ಷರು ಹಾಗೂ ಬಿ.ಎಲ್.ಎ.-2 ಸದಸ್ಯರು ಮನೆಮನೆಗೆ ಭೇಟಿ ನೀಡಿ ಹೊಸ ಮತದಾರರ ನೋಂದಣಿ, ಅಗತ್ಯ ತಿದ್ದುಪಡಿಗಳು ಹಾಗೂ ಮತದಾರರ ಪಟ್ಟಿಯ ಮಾಹಿತಿಯನ್ನು ನಿಖರಗೊಳಿಸುವ ಕಾರ್ಯವನ್ನು ಜವಾಬ್ದಾರಿಯಿಂದ ನಿರ್ವಹಿಸಬೇಕು. ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಸಾರ್ವಜನಿಕರಿಗೆ ಸಮರ್ಪಕವಾಗಿ ತಲುಪಿಸಿ ಯಾವುದೇ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ವಿಶೇಷ ಗಮನಹರಿಸಬೇಕು ಎಂದು ಅವರು ಕರೆ ನೀಡಿದರು.

ಸಭೆಯಲ್ಲಿ ಬೂತ್ ಮಟ್ಟದ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವುದು, ಕಾರ್ಯಕರ್ತರ ನಡುವಿನ ಸಮನ್ವಯ ಹೆಚ್ಚಿಸುವುದು ಹಾಗೂ ಮುಂಬರುವ ಸಂಘಟನಾ ಕಾರ್ಯಚಟುವಟಿಕೆಗಳ ಕುರಿತು ವಿಸ್ತೃತ ಚರ್ಚೆ ನಡೆಯಿತು. ಕಾರ್ಯಕರ್ತರು ತಮ್ಮ ಬೂತ್ ವ್ಯಾಪ್ತಿಯ ಅನುಭವಗಳು ಹಾಗೂ ಸ್ಥಳೀಯ ಮಟ್ಟದಲ್ಲಿ ಎದುರಾಗುತ್ತಿರುವ ಸವಾಲುಗಳನ್ನು ಹಂಚಿಕೊಂಡಿದ್ದು, ಅವುಗಳ ಪರಿಹಾರಕ್ಕೆ ಅಗತ್ಯ ಮಾರ್ಗದರ್ಶನ ನೀಡಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಚೆನ್ನಪ್ಪ ಕೊಟ್ಯಾನ್, ಪ್ರಧಾನ ಕಾರ್ಯದರ್ಶಿಗಳಾದ ಸುದರ್ಶನ ಬಜ ಹಾಗೂ ಶಿವಪ್ರಸಾದ್ ಶೆಟ್ಟಿ ಕರೋಪಾಡಿ, ಬಿ. ದೇವದಾಸ್ ಶೆಟ್ಟಿ, ರಶ್ಮಿತ್ ಶೆಟ್ಟಿ, ಸವಿತಾ ಶೆಟ್ಟಿ, ಯಶವಂತ ಪೊಳಲಿ, ಚಂದ್ರಶೇಖರ ಶೆಟ್ಟಿ, ವೆಂಕಟೇಶ್ ನಾವಡ, ಯಶೋಧರ ಪೊಳಲಿ, ಸುಕೇಶ್ ಚೌಟ, ಲೋಕೇಶ್ ಭರಣಿ, ಚಂದ್ರಹಾಸ ಪೊಳಲಿ, ರಾಧಾಕೃಷ್ಣ ತಂತ್ರಿ, ಪ್ರಮೀಳ, ಕಾರ್ತಿಕ್ ಬಲ್ಲಾಳ್, ಚಂದ್ರಾವತಿ, ರವೀಂದ್ರ ಸುವರ್ಣ, ನಿತಿನ್, ದಿವ್ಯ ರಾಜ್, ವಾಮನ ಆಚಾರ್ಯ ಸೇರಿದಂತೆ ಪಕ್ಷದ ಪ್ರಮುಖರು, ಬೂತ್ ಅಧ್ಯಕ್ಷರು, ಬಿ.ಎಲ್.ಎ.-2 ಸದಸ್ಯರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *