ಬಂಟ್ವಾಳ: ಯುವವಾಹಿನಿ (ರಿ.) ಬಂಟ್ವಾಳ ಘಟಕದ ಜಂಟಿ ಸಭೆಯಲ್ಲಿ ನೂತನ ಸಮಿತಿಯ ವಿಶೇಷ ಯೋಜನೆಯಾಗಿ “ಮನೆ ಮನೆ ಹಸಿರು ಅಭಿಯಾನ” ವನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಯಿತು.

ಯುವವಾಹಿನಿಯ “ಹಸಿರುಯಾನ” ಯೋಜನೆಯಡಿ ಈ ಅಭಿಯಾನವನ್ನು ಘಟಕದ ವ್ಯಾಪ್ತಿಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಸಂಕಲ್ಪ ಕೈಗೊಳ್ಳಲಾಗಿದೆ.

ಪರಿಸರ ಸಂರಕ್ಷಣೆ, ಹಸಿರು ವಾತಾವರಣ ನಿರ್ಮಾಣ ಹಾಗೂ ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಉಳಿಸುವ ಉದ್ದೇಶದಿಂದ ಪ್ರತಿಯೊಂದು ಮನೆಯಲ್ಲಿ ಕನಿಷ್ಠ ಒಂದು ಗಿಡವನ್ನು ನೆಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಮೂಲಕ ಸಮಾಜದಲ್ಲಿ ಪರಿಸರ ಜಾಗೃತಿ ಮೂಡಿಸುವುದರೊಂದಿಗೆ ಹಸಿರು ಪರಿಸರ ನಿರ್ಮಾಣಕ್ಕೆ ಯುವವಾಹಿನಿ ತನ್ನ ಬದ್ಧತೆಯನ್ನು ವ್ಯಕ್ತಪಡಿಸಿದೆ.

ಅಭಿಯಾನಕ್ಕೆ ಜುಲೈ 5ರಂದು ಯುವವಾಹಿನಿ (ರಿ.) ಬಂಟ್ವಾಳ ಘಟಕದ ಮಾಜಿ ಅಧ್ಯಕ್ಷ ಅರುಣ್ ಕುಮಾರ್ ಮಹಾಂಕಾಳಿಬೆಟ್ಟು ಅವರ ನಿವಾಸದಲ್ಲಿ, ಘಟಕದ ಅಧ್ಯಕ್ಷ ಕಿರಣ್ ರಾಜ್ ಪೂಂಜರೆಕೋಡಿ ಅವರ ನೇತೃತ್ವದಲ್ಲಿ ಹಣ್ಣಿನ ಗಿಡ ನೆಡುವ ಮೂಲಕ ಅಧಿಕೃತ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷ ಕಿರಣ್ ರಾಜ್ ಪೂಂಜರೆಕೋಡಿ, “ಮನೆ ಮನೆ ಹಸಿರು ಅಭಿಯಾನ” ಕೇವಲ ಗಿಡ ನೆಡುವ ಕಾರ್ಯಕ್ರಮವಲ್ಲ, ಪರಿಸರದ ಬಗ್ಗೆ ಜನರಲ್ಲಿ ಅರಿವು ಮತ್ತು ಜವಾಬ್ದಾರಿಯನ್ನು ಮೂಡಿಸುವ ಸಾಮಾಜಿಕ ಚಳುವಳಿಯಾಗಿದೆ ಎಂದು ತಿಳಿಸಿದರು. ಮುಂದಿನ ದಿನಗಳಲ್ಲಿ ಘಟಕದ ವ್ಯಾಪ್ತಿಯ ಎಲ್ಲ ಸದಸ್ಯರ ಮನೆಗಳಲ್ಲಿ ಗಿಡಗಳನ್ನು ನೆಡುವ ಮೂಲಕ ಅಭಿಯಾನವನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಸಂಕಲ್ಪ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಯುವವಾಹಿನಿ (ರಿ.) ಬಂಟ್ವಾಳ ಘಟಕದ ಪದಾಧಿಕಾರಿಗಳು, ಮಾಜಿ ಅಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು.


