ಪುತ್ತೂರು: ಜಿಮ್ ಟ್ರೈನರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಸಚಿನ್ ರೈ ಅವರು ಮೃತಪಟ್ಟಿರುವ ಘಟನೆ ಪುತ್ತೂರಿನ ಕಲ್ಲಿಮಾರ್ನಲ್ಲಿ ನಡೆದಿದ್ದು, ಸಾವಿನ ಕುರಿತು ಸಂಶಯ ವ್ಯಕ್ತಪಡಿಸಿದ ತಾಯಿ ಗುಲಾಬಿ ಅವರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಮೂಲತಃ ಮಡಂತ್ಯಾರ್ ನಿವಾಸಿಯಾಗಿದ್ದ ಸಚಿನ್ ರೈ, ಪ್ರಸ್ತುತ ಪುತ್ತೂರಿನ ಕಲ್ಲಿಮಾರ್ನಲ್ಲಿರುವ ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದು, ಕಳೆದ ಹಲವು ವರ್ಷಗಳಿಂದ ಜಿಮ್ ಟ್ರೈನರ್ ಆಗಿ ಕೆಲಸ ಮಾಡುತ್ತಿದ್ದರು.

ಜುಲೈ 5ರಂದು ಬೆಳಿಗ್ಗೆ ಸಚಿನ್ ರೈ ಕುಸಿದು ಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಮೃತರು ತಾಯಿ ಗುಲಾಬಿ ಹಾಗೂ ಸಹೋದರಿಯನ್ನು ಅಗಲಿದ್ದಾರೆ. ತಮ್ಮ ಮಗನ ಸಾವಿನ ಹಿಂದೆ ಸಂಶಯಾಸ್ಪದ ಸಂಗತಿಗಳಿವೆ ಎಂದು ಆರೋಪಿಸಿ ಗುಲಾಬಿ ಅವರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.


