Breaking
22 Aug 2026, Sat

ಬಸ್ ನಿಲ್ದಾಣದಲ್ಲಿ ಚೀಲದಲ್ಲಿ ಬಿಟ್ಟು ಹೋದ ನವಜಾತ ಹೆಣ್ಣು ಮಗು; ದಾರಿಹೋಕರ ಸಮಯಪ್ರಜ್ಞೆಯಿಂದ ರಕ್ಷಣೆ

ಶಿವಮೊಗ್ಗ: ಮಾನವೀಯತೆಯನ್ನೇ ಪ್ರಶ್ನಿಸುವ ಹೃದಯವಿದ್ರಾವಕ ಘಟನೆಯೊಂದು ಹೊಸನಗರ ತಾಲೂಕಿನ ರಿಪ್ಪನ್ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಗವಟೂರು ಹೊಳೆ ಸಮೀಪದ ಬಿಳಕಿ ಗ್ರಾಮದ ತೆಂಕೋಲ್ ಬಸ್ ನಿಲ್ದಾಣದಲ್ಲಿ ನವಜಾತ ಹೆಣ್ಣು ಮಗುವನ್ನು ಚೀಲದಲ್ಲಿ ಕಟ್ಟಿ, ಬಾಯಿಗೆ ಫೀಡಿಂಗ್ ಬಾಟಲ್ ಇಟ್ಟು ಬಿಟ್ಟು ಹೋಗಿರುವ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.


ಭಾನುವಾರ (ಜು. 5) ರಾತ್ರಿ ಬಸ್ ನಿಲ್ದಾಣದ ಬಳಿ ಸಾಗುತ್ತಿದ್ದ ದಾರಿಹೋಕರಿಗೆ ಮಗುವಿನ ಅಳುವಿನ ಶಬ್ದ ಕೇಳಿಬಂದಿದೆ. ಮೊದಲಿಗೆ ಅದು ನಾಯಿ ಅಥವಾ ಬೆಕ್ಕಿನ ಮರಿ ಇರಬಹುದೆಂದು ಭಾವಿಸಿ ಹತ್ತಿರ ಹೋಗಿ ನೋಡಿದಾಗ, ಚೀಲದೊಳಗೆ ನವಜಾತ ಹೆಣ್ಣು ಮಗು ಇರುವುದನ್ನು ಕಂಡು ಬೆಚ್ಚಿಬಿದ್ದರು. ತಕ್ಷಣವೇ ರಿಪ್ಪನ್ಪೇಟೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.


ಮಾಹಿತಿ ಪಡೆದ ಪಿಎಸ್ಐ ರಾಜು ರೆಡ್ಡಿ ಹಾಗೂ ಪೊಲೀಸ್ ಸಿಬ್ಬಂದಿ ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿ ರಾತ್ರಿ ಸುಮಾರು 9 ಗಂಟೆ ವೇಳೆಗೆ ಸ್ಥಳಕ್ಕೆ ಧಾವಿಸಿ ಮಗುವನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.


ಆಂಬ್ಯುಲೆನ್ಸ್ ಮೂಲಕ ಮಗುವನ್ನು ರಿಪ್ಪನ್ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಅಗತ್ಯ ಚಿಕಿತ್ಸೆ ನೀಡಲಾಗಿದೆ. ವೈದ್ಯರ ಪ್ರಾಥಮಿಕ ಪರೀಕ್ಷೆಯಲ್ಲಿ ಮಗು ಆರೋಗ್ಯವಾಗಿರುವುದು ದೃಢಪಟ್ಟಿದ್ದು, ಹೆಚ್ಚಿನ ಆರೈಕೆಗೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.


ಈ ಸಂಬಂಧ ರಿಪ್ಪನ್ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಗುವಿನ ಪೋಷಕರು ಯಾರು ಹಾಗೂ ಯಾವ ಕಾರಣಕ್ಕೆ ಈ ಕೃತ್ಯ ಎಸಗಿದ್ದಾರೆ ಎಂಬ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *