Breaking
6 Jul 2026, Mon

ಮುಂಬೈ ಮಳೆ ರೌದ್ರಾವತಾರ: 8 ಸಾವು, ಭೂಕುಸಿತದಿಂದ ರೈಲು-ರಸ್ತೆ ಸಂಚಾರ ಅಸ್ತವ್ಯಸ್ತ

ದೇಶದ ವಿವಿಧ ರಾಜ್ಯಗಳಲ್ಲಿ ಮುಂಗಾರು ಮಳೆ ಚುರುಕುಗೊಂಡಿರುವ ನಡುವೆಯೇ ಮಹಾರಾಷ್ಟ್ರ ರಾಜಧಾನಿ ಮುಂಬೈನಲ್ಲಿ ಮಳೆ ತನ್ನ ರೌದ್ರ ರೂಪ ತೋರಿದೆ. ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ನಗರದೆಲ್ಲೆಡೆ ಭೂಕುಸಿತ, ಕಟ್ಟಡ ಕುಸಿತ, ಪ್ರವಾಹ ಹಾಗೂ ಮರ ಉರುಳುವಂತಹ ಸರಣಿ ಅವಘಡಗಳು ಸಂಭವಿಸಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.

ಭಾನುವಾರ ಒಂದೇ ದಿನ ನಡೆದ ವಿವಿಧ ಅವಘಡಗಳಲ್ಲಿ ಒಟ್ಟು 8 ಮಂದಿ ಮೃತಪಟ್ಟಿದ್ದಾರೆ. ಮುಂಖುರ್ಡ್ ಪ್ರದೇಶದಲ್ಲಿ ಚಾಲ್ ಮಾದರಿಯ ಕಟ್ಟಡದ ಒಂದು ಭಾಗ ಕುಸಿದು 6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತೊಂದು ಕಡೆ ಮರ ಬಿದ್ದು ಓರ್ವ ವ್ಯಕ್ತಿ ಮೃತಪಟ್ಟರೆ, ಇನ್ನೊಂದು ಪ್ರದೇಶದಲ್ಲಿ ಕಟ್ಟಡದ ಗ್ರಿಲ್ ಪಾದಚಾರಿ ಮಾರ್ಗದ ಮೇಲೆ ಉರುಳಿಬಿದ್ದು ಮತ್ತೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.

ಸೋಮವಾರವೂ ಮಳೆಯ ಅಬ್ಬರ ಮುಂದುವರಿದಿದ್ದು, ಹಲವೆಡೆ ಭೂಕುಸಿತ ಹಾಗೂ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಪರಿಣಾಮವಾಗಿ ರೈಲು ಹಾಗೂ ರಸ್ತೆ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದೆ. ವಿಶೇಷವಾಗಿ ಮುಂಬೈ–ಪುಣೆ ಎಕ್ಸ್‌ಪ್ರೆಸ್‌ವೇ ಭೂಕುಸಿತದಿಂದ ಹಾನಿಗೊಳಗಾಗಿರುವ ಕಾರಣ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಇದರಿಂದ ಸಾವಿರಾರು ಪ್ರಯಾಣಿಕರು ಪರದಾಡುವಂತಾಗಿದೆ.

ನಿರಂತರ ಮಳೆಯಿಂದ ಕರ್ಜತ್–ಲೋನಾವಾಲ ಭೋರ್ ಘಾಟ್ ವಿಭಾಗದಲ್ಲಿ ಸೋಮವಾರ ಮುಂಜಾನೆ ಸುಮಾರು 3.05ಕ್ಕೆ ಠಾಕೂರ್ವಾಡಿ ಬಳಿ ಮೊದಲ ಭೂಕುಸಿತ ಸಂಭವಿಸಿದೆ. ಬಳಿಕ ಖಂಡಾಲಾ ಮತ್ತು ಮಂಕಿ ಹಿಲ್ ನಡುವೆಯೂ ಮತ್ತೊಂದು ಭೂಕುಸಿತ ಸಂಭವಿಸಿದ್ದು, ಅಪ್ ಲೈನ್, ಡೌನ್ ಲೈನ್ ಹಾಗೂ ಮಧ್ಯ ರೈಲು ಮಾರ್ಗಗಳ ಮೇಲೆ ಮಣ್ಣು ಮತ್ತು ಕಲ್ಲುಗಳು ಕುಸಿದಿವೆ. ಇದರಿಂದ ರೈಲು ಸಂಚಾರ ತೀವ್ರವಾಗಿ ಅಸ್ತವ್ಯಸ್ತಗೊಂಡಿದೆ.

ಪರಿಸ್ಥಿತಿಯ ಗಂಭೀರತೆಯನ್ನು ಮನಗಂಡು ನಗರಕ್ಕೆ ಹಾಗೂ ನಗರದಿಂದ ಸಂಚರಿಸುವ 16 ರೈಲುಗಳ ಸೇವೆಯನ್ನು ಸಂಪೂರ್ಣ ರದ್ದುಗೊಳಿಸಲಾಗಿದ್ದು, 9 ರೈಲುಗಳ ಮಾರ್ಗಗಳನ್ನು ಬದಲಾವಣೆ ಮಾಡಲಾಗಿದೆ. ಸಿಎಸ್‌ಎಂಟಿ–ಪುಣೆ ಇಂದ್ರಯಾಣಿ ಎಕ್ಸ್‌ಪ್ರೆಸ್, ಇಂಟರ್‌ಸಿಟಿ ಎಕ್ಸ್‌ಪ್ರೆಸ್, ಡೆಕ್ಕನ್ ಎಕ್ಸ್‌ಪ್ರೆಸ್, ಡೆಕ್ಕನ್ ಕ್ವೀನ್, ಪ್ರಗತಿ ಎಕ್ಸ್‌ಪ್ರೆಸ್, ಧುಲೆ ಎಕ್ಸ್‌ಪ್ರೆಸ್ ಹಾಗೂ ಪುಣೆ–ಸಿಎಸ್‌ಎಂಟಿ ಸಿಂಹಗಡ್ ಎಕ್ಸ್‌ಪ್ರೆಸ್ ಸೇರಿದಂತೆ ಹಲವು ಪ್ರಮುಖ ರೈಲುಗಳು ರದ್ದಾಗಿವೆ ಎಂದು ಕೇಂದ್ರ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸ್ವಪ್ನಿಲ್ ನೀಲಾ ತಿಳಿಸಿದ್ದಾರೆ.

ಭೂಕುಸಿತದ ಬಳಿಕ ರೈಲ್ವೆ ಸಿಬ್ಬಂದಿ, ವಿಪತ್ತು ನಿರ್ವಹಣಾ ಪಡೆ ಹಾಗೂ ಸ್ಥಳೀಯ ಆಡಳಿತ ಮಣ್ಣು ತೆರವು, ಹಳಿ ದುರಸ್ತಿ ಹಾಗೂ ಸಂಚಾರ ಪುನಃಸ್ಥಾಪನೆ ಕಾರ್ಯವನ್ನು ಯುದ್ಧೋಪಾದಿಯಲ್ಲಿ ಕೈಗೊಂಡಿದೆ. ಆದರೆ ನಿರಂತರ ಮಳೆಯ ಕಾರಣ ಕಾರ್ಯಾಚರಣೆಗೆ ಅಡಚಣೆ ಎದುರಾಗುತ್ತಿದೆ.

ಇನ್ನೂ ಕೆಲ ದಿನಗಳ ಕಾಲ ಮುಂಬೈ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಸಾರ್ವಜನಿಕರು ಅಗತ್ಯವಿಲ್ಲದ ಪ್ರಯಾಣವನ್ನು ತಪ್ಪಿಸುವಂತೆ ಆಡಳಿತ ಮನವಿ ಮಾಡಿದೆ.

Leave a Reply

Your email address will not be published. Required fields are marked *