ಕಲಬುರಗಿ: ನಗರದ ಜಗತ್ ವೃತ್ತದ ಬಳಿ ಕರ್ತವ್ಯದಲ್ಲಿದ್ದ ಸಿಎಆರ್ (CAR) ಕಾನ್ಸ್ಟೆಬಲ್ವೊಬ್ಬರು ಪೊಲೀಸ್ ವಾಹನದಲ್ಲೇ ಸರ್ಕಾರಿ 303 ರೈಫಲ್ನಿಂದ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಮಂಗಳವಾರ ನಡೆದಿದೆ.

ಮೃತರನ್ನು ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ನರಿಬೋಳ ಗ್ರಾಮದ ನಿವಾಸಿ ಶಿವಕುಮಾರ್ ಎಂದು ಗುರುತಿಸಲಾಗಿದೆ. ಅವರು ಕಲಬುರಗಿ ಸಿಎಆರ್ ವಿಭಾಗದಲ್ಲಿ ಕಾನ್ಸ್ಟೆಬಲ್ ಆಗಿ ಸೇವೆ ಸಲ್ಲಿಸುತ್ತಿದ್ದರು.

ಮುಖ್ಯಮಂತ್ರಿ ನಗರ ಪ್ರವಾಸದ ಹಿನ್ನೆಲೆಯಲ್ಲಿ ಭದ್ರತಾ ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟಿದ್ದ ಶಿವಕುಮಾರ್, ಕರ್ತವ್ಯದ ವೇಳೆ ಪೊಲೀಸ್ ವಾಹನದಲ್ಲಿದ್ದ ಸರ್ಕಾರಿ 303 ರೈಫಲ್ನಿಂದ ಎದೆಗೆ ಗುಂಡು ಹೊಡೆದುಕೊಂಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ನಗರ ಪೊಲೀಸ್ ಆಯುಕ್ತರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.

ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ಬಹಿರಂಗವಾಗಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.



