Breaking
8 Jul 2026, Wed

ಬೆಂಗಳೂರಲ್ಲಿ ಡ್ರಗ್ಸ್ ಜಾಲಕ್ಕೆ ಬಿಗಿ ಬಲೆ: ವಿದ್ಯಾರ್ಥಿಗಳು ಸೇರಿ 11 ಮಂದಿ ಬಂಧನ

ಬೆಂಗಳೂರು: ನಗರದಲ್ಲಿ ಮಾದಕ ವಸ್ತುಗಳ ಅಕ್ರಮ ಮಾರಾಟದ ವಿರುದ್ಧ ನಗರ ಪೊಲೀಸರು ನಡೆಸಿದ ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 11 ಆರೋಪಿಗಳನ್ನು ಬಂಧಿಸಿದ್ದಾರೆ.


ತ್ರಿಪುರಾ ಮೂಲದ ಸಂದೀಪ್ (26) ಹಾಗೂ ಶಾಂತಾನು ದರ್ಬಮಾ (24) ವಿದೇಶದಿಂದ ದೆಹಲಿ ಮಾರ್ಗವಾಗಿ ಬೆಂಗಳೂರಿಗೆ ತಲುಪುತ್ತಿದ್ದ ಡ್ರಗ್ಸ್ ಅನ್ನು ವಿವಿಧ ಗ್ರಾಹಕರಿಗೆ ಪೂರೈಕೆ ಮಾಡುತ್ತಿದ್ದರೆಂದು ಪೊಲೀಸರು ತಿಳಿಸಿದ್ದಾರೆ. ಕಳೆದ ಐದು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಾಗಿದ್ದ ಇಬ್ಬರೂ ಕಾಲೇಜು ವ್ಯಾಸಂಗದ ಜೊತೆಗೆ ಡ್ರಗ್ಸ್ ಪೆಡ್ಲಿಂಗ್ ಚಟುವಟಿಕೆಯಲ್ಲಿ ತೊಡಗಿದ್ದರು ಎನ್ನಲಾಗಿದೆ.


ಇದೇ ವೇಳೆ ಜೀವನಭೀಮಾನಗರ, ದೇವನಹಳ್ಳಿ ಮತ್ತು ಹೆಬ್ಬಗೋಡಿ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಇನ್ನೂ 9 ಮಂದಿಯನ್ನು ಬಂಧಿಸಲಾಗಿದೆ. ಕಾರ್ಯಾಚರಣೆಯಲ್ಲಿ 32.9 ಕೆಜಿ ಗಾಂಜಾ, 1.7 ಕೆಜಿ ಹೈಡ್ರೋ ಗಾಂಜಾ, ₹5.9 ಲಕ್ಷ ನಗದು, ಒಂದು ಬೈಕ್ ಹಾಗೂ ಎರಡು ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ.


ಜೀವನಭೀಮಾನಗರ ಪೊಲೀಸರು ನಡೆಸಿದ ದಾಳಿಯಲ್ಲಿ ಕೇರಳ ಮೂಲದ ಜಾಸಿರ್ (32) ಹಾಗೂ ಅಭಿಷೇಕ್ (21) ಬಂಧಿತರಾಗಿದ್ದಾರೆ. ದೇವನಹಳ್ಳಿ ಠಾಣೆ ಪೊಲೀಸರು ತುಫಾನ್ ಯಾದವ್ (26), ಲಿಟನ್ ದೇವನಾಥ್ (23), ಸುಮನ್ ದಾಸ್ (23), ಬಿಟ್ಟು ಕುಮಾರ್ (23) ಹಾಗೂ ಸುಶಾಂತ್ ಕುಮಾರ್ (22) ಅವರನ್ನು ಬಂಧಿಸಿದ್ದಾರೆ.


ಹೆಬ್ಬಗೋಡಿ ಪೊಲೀಸರು ಮಂಗಳೂರು ಮೂಲದ ಮೊಹಮ್ಮದ್ ಕಲಂದರ್ (36) ಮತ್ತು ನಿತೀಶ್ ಪೂಜಾರಿ (32) ಅವರನ್ನು ಬಂಧಿಸಿ, ಅವರಿಂದ 16 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *